2ಬಿ ಮೀಸಲಾತಿ ರದ್ದು: ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಖಂಡನೆ

Update: 2023-03-25 12:46 GMT

ಮಂಗಳೂರು, ಮಾ.25: ರಾಜ್ಯ ಬಿಜೆಪಿ ಸರಕಾರವು 2ಬಿ ಪ್ರವರ್ಗದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಶೇ.4 ಮೀಸಲಾತಿಯನ್ನು ರದ್ದುಪಡಿಸಿ ಪಂಚಮ ಶಾಲಿ ಲಿಂಗಾಯತರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಲು ಹುನ್ನಾರ ನಡೆಸಿರುವುದನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ.ಅಬ್ದುಲ್ ರಹಿಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಎಸ್.ಇ.ಕರೀಂ ಜಂಟಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ರಾಜ್ಯ ಸಂಪುಟದ ಈ ತೀರ್ಮಾನವು ಕಾನೂನುಬಾಹಿರ ಮತ್ತು ಚುನಾವಣಾ ತಂತ್ರವೆಂದು ಆಪಾದಿಸಿದರು.

ದೇಶದ ಪ್ರತಿಪಕ್ಷದ ಧ್ವನಿಯನ್ನು ಅಡಗಿಸಲು ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಉಚ್ಚಾಟಿಸಿ ರುವ ಕೇಂದ್ರದ ಬಿಜೆಪಿ ಸರಕಾರದ ಪ್ರಜಾಪ್ರಭುತ್ವ ಹತ್ಯೆಯ ದಿಕ್ಕಿನಲ್ಲೇ ರಾಜ್ಯ ಸರಕಾರವು ಸಾಗುತ್ತಿದೆ. ಮೀಸಲಾತಿ ಬಗೆಗಿನ ತೀರ್ಮಾನವು ಹುಚ್ಚುತನದ ಪರಮಾವಧಿ ಎಂದಿದ್ದಾರೆ.

ರಾಜ್ಯದಲ್ಲಿ ಇದುವರೆಗಿನ ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳ ವರದಿಯಲ್ಲೂ ಕೂಡ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಮುಸ್ಲಿಮರು ಹಿಂದುಳಿದವರೆಂದು ಗುರುತಿಸಿರುವ ಕಾರಣ ಮುಸ್ಲಿಮರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರೆಂಬ ಕಾರಣದಿಂದ ಮೀಸಲಾತಿ ನೀಡಿಲ್ಲ. ಜನಸಂಖ್ಯೆಯಲ್ಲಿ ಶೇ.15ರಷ್ಟಿರುವ ಮುಸ್ಲಿಮರಿಗೆ ಶೇ.4 ಮೀಸಲಾತಿಯನ್ನು ನೀಡಲಾಗುತ್ತಿದ್ದು, ಅದನ್ನೂ ಕೂಡ ಕಸಿದು ಕೊಳ್ಳುವ ಈ ತೀರ್ಮಾನ ನಾಡಿನ ಮುಸ್ಲಿಮರನ್ನು ಸಮಾಜದ ಮುಖ್ಯವಾಹಿಣಿಯಿಂದ ದೂರವಿಡುವ ಹುನ್ನಾರದ ಭಾಗವೆಂದು ಆಪಾದಿಸಿದರು.

Similar News