×
Ad

ನೈತಿಕತೆ ಬದುಕಿನ ಭಾಗವಾಗಬೇಕು: ಡಾ.ಬಿ.ಎ.ವಿವೇಕ ರೈ

ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸ್ವೀಕರಿಸಿದ ಬಿ.ಎಂ.ರೋಹಿಣಿ

Update: 2023-03-25 20:36 IST

ಉಡುಪಿ: ವೇದಿಕೆಯಲ್ಲಿ ಮಾತಾಗದೇ, ಬರವಣಿಗೆಯಲ್ಲಿ ನುಡಿಗಟ್ಟಾಗದೇ, ನೈತಿಕತೆ ಎಂಬುದು ಎಲ್ಲರ ಬದುಕಿನ ಭಾಗವಾಗಬೇಕು ಎಂದು ನಿವೃತ್ತ ಕುಲಪತಿ, ಖ್ಯಾತ ವಿದ್ವಾಂಸ, ಸಾಹಿತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಮಣಿಪಾಲ, ಮಹಾತ್ಮಗಾಂಧಿ ಸ್ಮಾರಕ ಕಾಲೇಜು ಉಡುಪಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣ ದಲ್ಲಿ ಇಂದು ನಡೆದ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಮಾಜದಲ್ಲಿಂದು ನೈತಿಕತೆ ಇರುವವರ ಪ್ರಮಾಣ ಕ್ಷೀಣಿಸುತ್ತಿದೆ. ಇತರರನ್ನು ಮೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯಲ್ಲಿ ಧರ್ಮ ಮತ್ತು ಜಾತಿಯನ್ನು ಅನನ್ಯತೆ ಎಂದು ತಿಳಿದುಕೊಂಡವರು ಹೆಚ್ಚಾಗಿದ್ದಾರೆ ಎಂದು  ಡಾ.ವಿವೇಕ ರೈ ತಿಳಿಸಿದರು.

ವಿದ್ವಾಂಸರು ಹಾಗೂ ಸಂಶೋಧಕರು ಇಂದು ಸಾಹಿತಿಗಳಾಗಿ ಪರಿಗಣಿತ ವಾಗುತ್ತಿಲ್ಲ. ಹೀಗಾಗಿ ಅವರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿಲ್ಲ. ಕೇವಲ ಕಥೆ, ಕಾದಂಬರಿ, ಕವನಗಳನ್ನು ಬರೆದವರು ಮಾತ್ರ ಸಾಹಿತಿಗಳಾಗಿ ಪರಿಗಣಿತರಾಗುತಿದ್ದಾರೆ ಎಂದವರು ನುಡಿದರು.

ಬಡತನ ಎಂಬುದು ಕೆಲವರಿಗೆ ವರ. ಎಲ್ಲಾ ಅನುಕೂಲಗಳಿದ್ದೂ ಇಂದಿನ ಮಕ್ಕಳನ್ನು ಗಮನಿಸುವಾಗ ಹೀಗೆ ಭಾಸವಾಗುತ್ತದೆ. ಬಡತನದ ಮೂಲಕ ಬಂದ ತಿಮ್ಮಪ್ಪಯ್ಯ ಅವರು ವಾಚನ ಪರಂಪರೆಯಿಂದ ಬಂದು ಲಿಖಿತ ಪರಂಪರೆಯಲ್ಲಿ ಪಾಂಡಿತ್ಯ ಮೆರೆದವರು ಎಂದು ಬಣ್ಣಿಸಿದರು.

ಕನ್ನಡದ ಪಂಡಿತ ಪರಂಪರೆಗೆ ಸೇರಿದ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಸಾಧನೆಯ ಹಿರಿತನದೊಂದಿಗೆ, ವಯಸ್ಸಿನ ಹಿರಿತನವನ್ನೂ ಪರಿಗಣಿಸಿ ನೀಡಲಾಗುತ್ತದೆ. ಹಿರಿಯರನ್ನು ಗೌರವಿಸುವ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ. ಹೀಗಾಗಿ ಲೇಖಕಿ, ಸಂಶೋಧಕಿ, ಶಿಕ್ಷಕಿ ಆಗಿರುವ ಬಿ.ಎಂ. ರೋಹಿಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷರೂ ಆಗಿರುವ ಡಾ.ರೈ ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎಂ.ರೋಹಿಣಿ, ದಕ್ಷಿಣ ಕನ್ನಡ ಜಿಲ್ಲೆ ಪಂಡಿತ ಪರಂಪರೆಗೆ ತುಂಬಾ ಹೆಸರಾದುದು. ಇಲ್ಲಿ ಗೋವಿಂದ ಪೈಗಳಿಂದ ಹಿಡಿದು ರೈಗಳವರೆಗೆ ಈ ಪರಂಪರೆ ಮುಂದುವರಿದಿದೆ. ಕೆಲಸದ ಹುಚ್ಚು ಹಾಗೂ ತೊಡು ನನ್ನನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಈಗ  ಜಿಲ್ಲೆಯಲ್ಲಿ ಭಾರೀ ಸಂಖ್ಯೆಯ ಕಾನ್ವೆಂಟ್‌ಗಳಲ್ಲಿರುವ ಸಿಸ್ಟರ್‌ಗಳ ಬಗ್ಗೆ ಅಧ್ಯಯನ ನಡೆಸುತಿದ್ದೇನೆ ಎಂದರು.

ಮಲಯಾಳಂ ಮಾತೃಭಾಷೆಯ ನಾನು ತಂದೆಯ ಮೂಲಕ ಕನ್ನಡಕ್ಕೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಆರೋಗ್ಯಪೂರ್ಣವಾದ ಓದುವ ಹುಚ್ಚು ನನ್ನನ್ನು ಬದುಕಿನಲ್ಲಿ ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎಂದರು. ಮಾಹೆಯ ಸಹ ಕುಲಪತಿಗಳಾದ ಡಾ.ನಾರಾಯಣ ಸಭಾಹಿತ್ ಅವರು ರೋಹಿಣಿ ಅವರನ್ನು ಪ್ರಶಸ್ತಿ ಹಾಗೂ 10000 ರೂ.ಗಳ ಚೆಕ್ ನೀಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮುಳಿಯ ಗೋಪಾಲಕೃಷ್ಣ ಭಟ್ಟರ ‘ದೊಡ್ಡವರ ಸಣ್ಣ ಕಥೆಗಳು’ ಕೃತಿಯನ್ನು ಮುಳಿಯ ರಘುರಾಮ ಭಟ್ಟ ಅನಾವರಣಗೊಳಿಸಿದರು. ಮುಳಿಯ ರಾಘವಯ್ಯ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು.

ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲೆ ಶಶಿಲೇಖಾ ಬಿ. ಅವರು ಅಭಿನಂದನಾ ಭಾಷಣ ಮಾಡಿದರು. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಮನೋರಮಾ ಎಂ.ಭಟ್ ಪ್ರಶಸ್ತಿ ಕುರಿತು ಮಾತನಾಡಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಅತಿಥಿಗಳನ್ನು ಸ್ವಾಗತಿಸಿದರೆ, ಎಂಜಿಎಂ ಕಾಲೇಜಿನ ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Similar News