ರಾಹುಲ್ ಅನರ್ಹತೆ ಮತ್ತು ಕಾಂಗ್ರೆಸ್ಸಿನ ಸೈದ್ಧಾಂತಿಕ ದಿವಾಳಿತನ

Update: 2023-03-25 16:31 GMT

ಕರ್ನಾಟಕದ ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ನಿಂದನೆಗೆ ಸಂಬಂಧ ಪಟ್ಟ ಪ್ರಕರಣದಲ್ಲಿ ಗುಜರಾತಿನ ಸೂರತ್ ಕೆಳ ನ್ಯಾಯಾಲಯದ ತೀರ್ಪು ಕಾಂಗ್ರೆಸ್ಸಿನ ಅಧಿನಾಯಕ ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದು ಇಂದು ದೇಶದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈಗ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಒಮ್ಮೆ ತಲೆ ಹೊರಳಿಸಿ ನೋಡಬೇಕಿದೆ. ಇದೇ ಲೋಕಸಭಾ ಸೆಕ್ರೆಟರಿಯೇಟ್ ಇದೇ ವರ್ಷದ ಜನವರಿ ತಿಂಗಳ 18ರಂದು ಎನ್.ಸಿ.ಪಿ ಪಕ್ಷದ ಸಂಸದರೊಬ್ಬರನ್ನು ಅನರ್ಹಗೊಳಿಸಿತ್ತು. ಬಿಜೆಪಿ ಸರಕಾರದ ಕಟುಟೀಕಾಕಾರನಾಗಿದ್ದ ಯುವ ಸಂಸದನ ವಿರುದ್ಧ ಮೋದಿ ಸರಕಾರ ಸೇಡಿನ ಭಾಗವಾಗಿಯೇ  ಅನರ್ಹಗೊಳಿಸಿತ್ತು. ವಿಪರ್ಯಾಸ ಎಂದರೆ ಅಂದು ಕಾಂಗ್ರೆಸ್ ಆ ಯುವ ಸಂಸದನ ಅನರ್ಹತೆಯನ್ನು ಬೆಂಬಲಿಸಿತ್ತು... ! 

ಕೇಂದ್ರಾಡಳಿತ ಪ್ರದೇಶ ಆಗಿರುವ ಲಕ್ಷದ್ವೀಪ ಲೋಕಸಭಾ ಕ್ಷೇತ್ರವನ್ನು 2014ರಿಂದ ಪ್ರತಿನಿಧಿಸುತ್ತಿರುವ ಸಂಸತ್ ಸದಸ್ಯ ಮೊಹಮ್ಮದ್ ಫೈಝಲ್. ಇದೇ ವರ್ಷದ ಜನವರಿ 18ರಂದು ಲೋಕಸಭೆಯ ಸೆಕ್ರೆಟರಿಯೆಟ್ ಮೊಹಮ್ಮದ್ ಫೈಝಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿತ್ತು. 2009ರ ಪಾರ್ಲಿಮೆಂಟ್ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಮತ್ತು ಎನ್. ಸಿ. ಪಿ ಕಾರ್ಯಕರ್ತರ ಮಧ್ಯೆ ನಡೆದ ರಾಜಕೀಯ ಸಂಘರ್ಷವು  ಗುಂಪು ಘರ್ಷಣೆಯಲ್ಲಿ ಕೊನೆಗೊಂಡು ಎರಡೂ ಪಕ್ಷಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಲಕ್ಷದ್ವೀಪದಲ್ಲಿ 9 ಬಾರಿ ಸಂಸದರಾಗಿ,ಲೋಕಸಭಾ ಸ್ಪೀಕರ್ ಆಗಿ, 2004ರಲ್ಲಿ ಮೊದಲ ಬಾರಿಗೆ ಸೋತಾಗ  ರಾಜ್ಯಸಾಭಾ ಸದಸ್ಯರಾಗಿ  ಒಂದನೇ ಯುಪಿಎ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದ ಗಾಂಧಿ ಕುಟುಂಬದ ಅತ್ಯಾಪ್ತರಲ್ಲಿ ಒಬ್ಬರಾಗಿದ್ದ ಪಿ.ಎಂ ಸಯೀದರ ಅಳಿಯ ಮೊಹಮ್ಮದ್ ಸಾಲಿ ಎಂಬವರು ನೀಡಿದ ದೂರಿನಂತೆ ಅಂದು ಎನ್.ಸಿ.ಪಿ  ಪಕ್ಷದ ಲಕ್ಷ ದ್ವೀಪದ ಯುವ ಘಟಕದ ಮುಖಂಡರಾಗಿದ್ದ ಮೊಹಮ್ಮದ್ ಫೈಝಲ್ ಮತ್ತು ಅವರ ಸಹೋದರ ಸೇರಿದಂತೆ 35ಮಂದಿಯ ಮೇಲೆ ಕೊಲೆ ಯತ್ನದಂತಹ ಗಂಭೀರ ಪ್ರಕರಣ ದಾಖಲಿಸಿತ್ತು. 2009ರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರಕಾರ ಇತ್ತು. ಪಿ.ಎಂ ಸಯೀದ್ ಅವರ ನಿಧನಾ ನಂತರ ಲೋಕಸಭಾ ಸದಸ್ಯರಾಗಿದ್ದ ಅವರ ಪುತ್ರ ಹಮ್ದುಲ್ಲ ಸಯೀದ್ ಪೋಲೀಸರ ಮೇಲೆ ಪ್ರಭಾವ ಬೀರಿ ಫೈಝಲ್ ವಿರುದ್ಧ ಗಂಭೀರ ಪ್ರಕರಣ ದಾಖಲಾಗುವಂತೆ ನೋಡಿಕೊಂಡರು. 

2014ರ ಚುನಾವಣೆಯಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಮೊಹಮ್ಮದ್ ಫೈಝಲ್ ಎಂಬ ಯುವಕ ಹಮ್ದುಲ್ಲ ಸಯೀದ್  ವಿರುದ್ಧ ಸ್ಪರ್ಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಬೆಳೆದು ಬಂದ ಜಲ ಕ್ರೀಡಾಪಟು(ಡೈವಿಂಗ್) ಆಗಿದ್ದ ಫೈಝಲ್ ಇಡೀ ಲಕ್ಷದ್ವೀಪ ಲೋಕಸಭಾ ವ್ಯಾಪ್ತಿಯ ಎಲ್ಲಾ 11  ಜನವಾಸದ ದ್ವೀಪ ಗಳಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. 

2019ರಲ್ಲಿ ಮತ್ತೊಮ್ಮೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿಂತು ಸಂಸತ್ತಿಗೆ ಎರಡನೇ ಬಾರಿಗೆ ಆಯ್ಕೆಯಾದ ಫೈಝಲ್ ಗೆ ಚುನಾವಣಾ ಎದುರಾಳಿ ಕಾಂಗ್ರೆಸ್ ಮತ್ತು ಸೈದ್ದಾಂತಿಕ ವೈರಿ ಬಿಜೆಪಿಯನ್ನು ಒಟ್ಟಿಗೆ ಎದುರಿಸಬೇಕಾದ ಪರಿಸ್ಥಿತಿ ಎದುರಾಯಿತು.

ಫೈಝಲ್ ಎರಡನೇ ಅವಧಿಗೆ ಪಾರ್ಲಿಮೆಂಟಿಗೆ ಹೋದ ನಂತರ ಮೋದಿ ಸರಕಾರ ತನ್ನ ಫ್ಯಾಸಿಸ್ಟ್ ನೀತಿಗಳನ್ನು 99% ಮುಸ್ಲಿಮರೇ ಇರುವ ಲಕ್ಷದ್ವೀಪದ ಜನರ ಮೇಲೆ ಆಕ್ರಮಣಕಾರಿಯಾಗಿ ಜಾರಿ ಮಾಡತೊಡಗಿತು. ಗುಜರಾತಿನ ಶಾಸಕ ಮೋದಿ, ಶಾ ಆಪ್ತ ಪ್ರಫುಲ್ ಪಟೇಲ್ ಕೋಡಾರನ್ನು ಲಕ್ಷದ್ವೀಪದ ಆಡಳಿತಧಿಕಾರಿಯಾಗಿ ನೇಮಕ ಮಾಡಿದ ಮೋದಿ ಸರಕಾರವು ದ್ವೀಪದ ಜನರ ಬದುಕಲ್ಲಿ ನೆಮ್ಮದಿ ಸಿಗದಂತಹ ರೀತಿಯಲ್ಲಿ ಕಿರುಕುಳ ನೀಡತೊಡಗಿತು. ಕಾಂಗ್ರೆಸ್ ಮಾತ್ರ ಬಿಜೆಪಿಯ ಫ್ಯಾಸಿಸ್ಟು ನೀತಿಗಳನ್ನು ಎದುರಿಸುವ ಬದಲಾಗಿ ಫೈಝಲ್ ಮತ್ತು ಅವರು ಪ್ರತಿನಿಧಿಸುವ ಎನ್.ಸಿ.ಪಿ ಪಕ್ಷದ ವಿರುದ್ಧವೇ ತನ್ನ ಪೌರುಷ ತೋರಲು ಆಸಕ್ತಿ ತೋರಿತು. 

ಪಾರ್ಲಿಮೆಂಟಲ್ಲಿ  ಲಕ್ಷದ್ವೀಪವಾಸಿಗಳ ಪರವಾಗಿ ಫೈಝಲ್ ಮೋದಿ ಸರಕಾರದ ನಿಲುವುಗಳನ್ನು ಬಲವಾಗಿ ಮತ್ತು ಆಕ್ರಮಣಕಾರಿಯಾಗಿ ವಿರೋಧಿಸುತ್ತಲೇ ಬಂದರು. ಎನ್. ಸಿ. ಪಿ ಯ ಫೈರ್ ಬ್ರ್ಯಾಂಡ್ ಸಂಸದೆ ಸುಪ್ರಿಯಾ ಸುಲೆ ಜೊತೆ ಸೇರಿಕೊಂಡು ಫೈಝಲ್, ಮೋದಿ ಸರಕಾರದ ವಿರುದ್ಧ ಪ್ರಬಲ ಟೀಕಾಕಾರರಾಗಿ ಸಂಸತ್ತಿನಲ್ಲಿ ಬಿಜೆಪಿಗೆ ತಲೆನೋವಾಗುವ ರೀತಿಯಲ್ಲಿ ಸರಕಾರದ ಜನವಿರೋಧಿ ನೀತಿಗಳನ್ನು ಪರಿಣಾಮಕಾರಿಯಾಗಿ ವಿರೋಧಿಸುತ್ತಲೇ ಬಂದರು. ಫೈಝಲರ ರಾಜಕೀಯ ಎದುರಾಳಿ  ಕಾಂಗ್ರೆಸ್ ಮಾತ್ರ ಬಿಜೆಪಿಯ ಆಡಳಿತಧಿಕಾರಿ ಪ್ರಫುಲ್ಲ ಪಟೇಲ್ ಜೊತೆ ಸೇರಿಕೊಂಡು 2009ರ ಬೀದಿ ಜಗಳದ ಪ್ರಕರಣವನ್ನು ಫೈಝಲ್ ವಿರುದ್ಧ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತು.

ಜೈಲು ಬಿಡಿ ಕನಿಷ್ಠ ಪೊಲೀಸ್ ಠಾಣೆಗಳಲ್ಲಿ ಲಾಕಪ್ ಗಳೇ ಇಲ್ಲದ ದೇಶದಲ್ಲೇ ಅತ್ಯಂತ ಕನಿಷ್ಠ ಕ್ರೈಂ ರೇಟ್ ಹೊಂದಿರುವ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಲೋಕಸಭಾ ಸದಸ್ಯರಾಗಿರುವ ಫೈಝಲ್ ಮತ್ತು ಅವರ ಸಹೋದರ ಸೇರಿದಂತೆ ಐವರ ವಿರುದ್ಧ  ಕವರತ್ತಿ ದ್ವೀಪದ ಕೆಲಹಂತದ ನ್ಯಾಯಾಲಯವು 10ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 1ಲಕ್ಷ ರೂಪಾಯಿ ದಂಡ ವಿಧಿಸಿ ಸಂಸತ್ ಸದಸ್ಯರನ್ನು ಕೇರಳದ ಕಣ್ಣೂರು ಸೆಂಟ್ರಲ್ ಜೈಲಿಗಟ್ಟಿತು. ಲಕ್ಷದ್ವೀಪದಲ್ಲಿ ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ವಕೀಲರುಗಳೇ ಇರೋದಿಲ್ಲ . ಜನರೇ ವಾದಿಸುವ ಸಂಪ್ರದಾಯ ಇಂದಿಗೂ ಇದೆ. ಅಂತಹ ವಕೀಲರೆ ಇಲ್ಲದೆ ನಡೆಯುವ  ಕೋರ್ಟಿನ ತೀರ್ಪನ್ನು ಸ್ವಾಗತಿಸಿದ ಕಾಂಗ್ರೆಸ್, ಕೇಂದ್ರ ಸರಕಾರದ ಮೇಲೆ ಪ್ರಭಾವ ಬೀರಿ ಜನವರಿ 18ಕ್ಕೆ ಲೋಕಸಭಾ ಸೆಕ್ರೆಟರಿಯೆಟ್ ಫೈಝಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿತು. ಅನರ್ಹಗೊಂಡ ಬೆನ್ನಲ್ಲೇ  ತೆರವಾದ ಲಕ್ಷದ್ವೀಪ ಲೋಕಸಭಾ ಕ್ಷೇತ್ರಕ್ಕೆ ಫೆಬ್ರವರಿ 28ಕ್ಕೆ ಲೋಕಸಭಾ ಉಪ ಚುನಾವಣೆಯನ್ನು ಚುನಾವಣಾ ಆಯೋಗದ ಮೂಲಕ ಘೋಷಣೆ ಮಾಡಿಸುವಲ್ಲಿ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್ ಯಶಸ್ವಿಯಾಯಿತು. ಕವರತ್ತಿ ನ್ಯಾಯಾಲಯದ ತೀರ್ಪನ್ನು ರದ್ದು ಗೊಳಿಸುವಂತೆ ಕೇರಳ ಹೈಕೋರ್ಟಲ್ಲಿ ಫೈಝಲ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಕೇರಳ ಹೈಕೋರ್ಟ್, ಜನವರಿ 25ರಂದು ಕವರತ್ತಿ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಫೈಝಲ್ ಮತ್ತು ಅವರ ಸಂಗಾತಿಗಳನ್ನು ಬಿಡುಗಡೆಗೊಳಿಸಿತು. ಹಾಗೆಯೇ ಲೋಕಸಭಾ ಸದಸ್ಯತ್ವವನ್ನು ಊರ್ಜಿತಗೊಳಿಸಿ ಲೋಕಸಭಾ ಅಧಿವೇಶನಗಳಲ್ಲಿ ಭಾಗವಹಿಸಬಹುದೆಂದು ಆದೇಶ ನೀಡಿತು. ಬಿಡುಗಡೆಗೊಂಡು ದ್ವೀಪಕ್ಕೆ ತೆರಳಿದ ಫೈಝಲರಿಗೆ ಪ್ರತಿ ದ್ವೀಪಗಳಲ್ಲಿ ಅಭೂತಪೂರ್ವ ಸ್ವಾಗತ ಕೋರುತ್ತಿದ್ದಾರೆ Moothonu come Return (ಅಣ್ಣ ತಿರುಗಿ ಬಂದರು) ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ವಿರುದ್ಧ ಒಂದು ಆಂದೋಲನದಂತೆ ಫೈಝಲರನ್ನು ಲಕ್ಷದ್ವೀಪದಲ್ಲಿ ಎತ್ತಿ ಮೆರೆದಾಡುತ್ತಿದ್ದಾರೆ.

ಮೋದಿ ಸರಕಾರದ ಪಿತೂರಿಯಿಂದ ಶಿಕ್ಷೆಗೆ ಒಳಗಾಗಿ ಕಣ್ಣೂರು ಸೆಂಟ್ರಲ್ ಜೈಲಲ್ಲಿದ್ದಾಗ ಒಬ್ಬನೇ ಕಾಂಗ್ರೆಸ್ ನಾಯಕ ಜೈಲಿಗೆ ಹೋಗಿ ಭೇಟಿ ನೀಡಿಲ್ಲ. ಕೇರಳ ಸಿಪಿಐಎಂ ಕಾರ್ಯದರ್ಶಿ ಗೋವಿಂದನ್ ಮಾಸ್ಟರ್ ಜೈಲಿಗೆ ಹೋಗಿ ಭೇಟಿ ನೀಡಿ ಕಾನೂನು ನೆರವು ನೀಡಿ ಫೈಝಲರ ಬಿಡುಗಡೆಗೆ ಪ್ರಯತ್ನಿಸಿದರು. ಸಿಪಿಐಎಂ ಪಕ್ಷ ಮತ್ತು ಫೈಝಲ್ ಪ್ರತಿನಿಧಿಸುವ ಎನ್. ಸಿ. ಪಿ ಪಕ್ಷವು ಕೇರಳದಲ್ಲಿ ಎಡ ರಂಗದ ಭಾಗವಾದರೂ ಲಕ್ಷದ್ವೀಪದಲ್ಲಿ ಪರಸ್ಪರ ರಾಜಕೀಯ ಎದುರಾಳಿ ಆಗಿದ್ದರೂ ಫ್ಯಾಸಿಸ್ಟ್ ವಿರೋಧಿ ಹೋರಾಟದಲ್ಲಿ ಸಿಪಿಐಎಂ ತನ್ನ ಬದ್ಧತೆಯನ್ನು ಪ್ರದರ್ಶಿಸಿತು. ಫೈಝಲ್ ಜೈಲಲ್ಲಿರುವಾಗ ಕಾಂಗ್ರೆಸ್ ಮಾತ್ರ ಉಪಚುನಾವಣಾ ತಯಾರಿ ನಡೆಸುತ್ತಿತ್ತು.

ಫೈಝಲರಿಗೆ ಆದ ಸ್ಥಿತಿ ಇಂದು ಕಾಂಗ್ರೆಸ್ ಅಧಿನಾಯಕನಿಗೆ ಆಗಿದೆ. ಕಾಂಗ್ರೆಸ್ ತನಗೆ ಮಾಡಿದ ಪಿತೂರಿಗೆ ಸೇಡು ತೀರಿಸಿಕೊಳ್ಳದ ಫೈಝಲ್ ರಾಹುಲ್ ಗಾಂಧಿ ಅವರ ಅನರ್ಹತೆ ಮಾಡಿದ ಕ್ರಮವನ್ನು ಪ್ರಬಲವಾಗಿ ಖಂಡಿಸಿದ್ದಾರೆ.

ರಾಹುಲ್ ಗಾಂಧಿ ಮತ್ತು ಅವರ ಪಕ್ಷ ಬಿಜೆಪಿಯ ಹಿಂದುತ್ವದ ರಾಜಕೀಯವನ್ನು ಅದರ ನಾಯಕರಿಗೆ ಮನವರಿಕೆ ಮಾಡಿಸುವಲ್ಲಿ ವಿಫಲವಾಗಿದೆ. ರಾಹುಲ್ ಅನರ್ಹತೆ ವಿಚಾರ ಮೋದಿ ಸರಕಾರದ ವಿರುದ್ಧ ಇತರ ವಿರೋಧ ಪಕ್ಷಗಳ ಪ್ರತಿಕ್ರಿಯೆಗಳನ್ನು ನೋಡಿದಾಗ ಕಾಂಗ್ರೆಸ್ ಸಪ್ಪೆಯಾಗಿದೆ. ಸುರ್ಜೆವಾಲರಂತಹ ಮೃದು ಹಿಂದುತ್ವವಾದಿಗಳಿಂದ ಕಾಂಗ್ರೆಸ್ ನರಳಿ ಹೋಗಿದೆ. ಕರ್ನಾಟಕದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತನ್ನ ನಾಯಕನಿಗಾದ ಅನ್ಯಾಯವನ್ನು ಕನಿಷ್ಠ ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸದಿರುವುದು ಕಾಂಗ್ರೆಸ್ಸಿನ ಸೈದ್ಧಾಂತಿಕ ದಿವಾಳಿತನಕ್ಕೆ ಸಾಕ್ಷಿಯಾದಂತಿದೆ.

ಫ್ಯಾಸಿಸ್ಟ್ ವಿರೋಧಿ ಜನನಾಯಕರನ್ನು ರಕ್ಷಿಸೋದು ಬಿಡಿ, ಕನಿಷ್ಠ ಅವರಿಗೆ ತೊಂದರೆ ಕೊಡಬಾರದು ಎಂಬ ಬೇಸಿಕ್ ಸಿದ್ದಾಂತವನ್ನೇ ಕಾಂಗ್ರೆಸ್ ಹೊಂದಿಲ್ಲ. ಇಂತಹ ನಿಲುವುಗಳಿಂದಲೇ ಇಂದು ರಾಹುಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಹುಲ್ ಗೆ ಎದುರಾದ ಸಂಕಟ ಭವಿಷ್ಯದಲ್ಲಿ ಕಾಂಗ್ರೆಸ್ ಅನ್ನು ಅಪೋಶನ ತೆಗೆದುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ಒಂದು ಸ್ಪಷ್ಟವಾದ ಸೈದ್ದಾಂತಿಕ ನಿಲುವು ಹೊಂದುವುದು ಒಳ್ಳೆಯದು.

Similar News