ಮೋದಿ ಅಂದರೆ ಭ್ರಷ್ಟಾಚಾರ ಎಂದಿದ್ದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್‌ ವೈರಲ್: ನಟಿ ಸ್ಪಷ್ಟೀಕರಣ ಏನು?

ರಾಹುಲ್‌ರಿಗೆ ಹೆದರಿದ್ದಾರೆ, ನಿಮಗೆ ಯಾರೂ ಹೆದರಿಲ್ಲ, ಚಿಂತಿಸಬೇಡಿ ಎಂದ ನೆಟ್ಟಿಗರು

Update: 2023-03-26 08:23 GMT

ಹೊಸದಿಲ್ಲಿ: ರಾಹುಲ್‌ ಗಾಂಧಿ (Rahul Gandhi) ಅವರ 'ಮೋದಿ ಉಪನಾಮ' ಹೇಳಿಕೆ ಪ್ರಕರಣದಲ್ಲಿ ದೋಷಿ ಎಂದು ಘೋಷಣೆಯಾಗುತ್ತಿದ್ದಂತೆ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರು 2018 ರಲ್ಲಿ ಮೋದಿ ಹೆಸರಿನ ಬಗ್ಗೆ ಮಾಡಿದ್ದ ಟ್ವೀಟ್‌ ಮತ್ತೆ ಮುನ್ನೆಲೆಗೆ ಬಂದಿದೆ. 

 “ಇಲ್ಲಿ ಮೋದಿ, ಅಲ್ಲಿ ಮೋದಿ, ಎಲ್ಲಿ ನೋಡಿದರೂ ಮೋದಿ, ಆದರೇನು? ಪ್ರತಿ ಮೋದಿ ಹಿಂದೆ ಭ್ರಷ್ಟಾಚಾರದ ಉಪನಾಮವಿದೆ. ಮೋದಿ ಅಂದರೆ ಭ್ರಷ್ಟಾಚಾರ್, ಮೋದಿ ಹೆಸರಿನ ಅರ್ಥವನ್ನು ಭ್ರಷ್ಟಾಚಾರವೆಂದು ಬದಲಾಯಿಸೋಣ, ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ, ನೀರವ್‌, ಲಲಿತ್‌, ನಮೋ ಅಂದರೆ ಭ್ರಷ್ಟಾಚಾರ” ಎಂದು ಖುಷ್ಬೂ ಟ್ವೀಟ್‌ ಮಾಡಿದ್ದರು.  
 
ಇದು ಖುಷ್ಬೂ ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ಮಾಡಿದ್ದ ಟ್ವೀಟ್‌ ಆಗಿದ್ದು, ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

ತನ್ನ ಹಳೆಯ ಟ್ವೀಟ್‌ ಚರ್ಚೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ, “ನನ್ನ ಹಳೆಯ ಟ್ವೀಟ್‌ ಅನ್ನು ಮತ್ತೆ ಎಳೆದು ತರುತ್ತಿರುವ ಕಾಂಗ್ರೆಸ್‌ ಎಷ್ಟು ಹತಾಶಗೊಂಡಿದೆ ಎಂದು ತೋರಿಸುತ್ತಿದೆ” ಎಂದು ಪಿಟಿಐಗೆ ತಿಳಿಸಿದ್ದಾರೆ.

"ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಪೋಸ್ಟ್ ಮಾಡಿದ 'ಮೋದಿ' ಟ್ವೀಟ್‌ಗೆ ನಾನು ನಾಚಿಕೆ ಪಡುವುದಿಲ್ಲ, ನಾನು ನಾಯಕನನ್ನು ಅನುಸರಿಸುತ್ತಿದ್ದೆ ಮತ್ತು ಪಕ್ಷದ ಭಾಷೆಯಲ್ಲಿ ಮಾತನಾಡುತ್ತಿದ್ದೆ" ಎಂದು ಅವರು ಹೇಳಿದ್ದಾರೆ.

ಖುಷ್ಬೂ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು, "ಚಿಂತೆ ಮಾಡಬೇಡಿ ಮೇಡಂ, ನಿಮ್ಮ ಈ ಟ್ವೀಟ್‌ಗೆ ಯಾರೂ ಕೇಸ್‌ ಹಾಕಲ್ಲ, ಯಾಕಂದ್ರೆ ಅವರು ರಾಹುಲ್‌ ಗಾಂಧಿಗೆ ಹೆದರಿದ್ದಾರೆ, ನಿಮ್ಮ ಬಗ್ಗೆ ಯಾರೂ ಹೆದರಲ್ಲ" ಎಂದಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸದಸ್ಯರೂ ಆಗಿರುವ ನಟಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದ ನಂತರ 2020ರಲ್ಲಿ ಬಿಜೆಪಿಗೆ ಸೇರಿದ್ದರು.

Similar News