ಸಂಸತ್ತಿನಲ್ಲಿ ನನ್ನ ತಂದೆ, ತಾಯಿ, ಸಹೋದರನಿಗೆ ಅವಮಾನ ಮಾಡಿದವರ ವಿರುದ್ದ ಕ್ರಮ ಕೈಗೊಂಡಿಲ್ಲ: ಪ್ರಿಯಾಂಕಾ ಗಾಂಧಿ

‘ಒಬ್ಬ ವ್ಯಕ್ತಿಯ ಬಾಯಿ ಮುಚ್ಚಿಸಲು ಇಷ್ಟೆಲ್ಲಾ ಮಾಡಿರುವುದು ನಗು ತರಿಸುತ್ತದೆ…ಈ ದೇಶದ ಪ್ರಧಾನಿ ಒಬ್ಬ ಹೇಡಿ’

Update: 2023-03-26 07:23 GMT

ಹೊಸದಿಲ್ಲಿ: "ನನ್ನ ಸಹೋದರ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಬಳಿಗೆ ಹೋಗಿ ಅವರನ್ನು ಅಪ್ಪಿಕೊಂಡು, ನಿಮ್ಮ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದ್ದರು. ನಾವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದೇವೆ.  ಆದರೆ ನಮ್ಮಲ್ಲಿ ದ್ವೇಷದ ಸಿದ್ಧಾಂತವಿಲ್ಲ.  ನನ್ನ ಕುಟುಂಬಕ್ಕೆ  ಮತ್ತೆ ಮತ್ತೆ ಅವಮಾನ ಮಾಡಲಾಗಿದೆ,  ಆದರೆ ನಾವು  ಸುಮ್ಮನಾಗಿದ್ದೆವು. ಸಂಸತ್ತಿನಲ್ಲಿ ನನ್ನ ತಂದೆ, ತಾಯಿ, ಸಹೋದರನಿಗೆ ಅವಮಾನ ಮಾಡಿದವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರವಿವಾರ ಹೇಳಿದ್ದಾರೆ.

"ಸಂಸತ್ತಿನಲ್ಲಿ ನನ್ನ ತಂದೆಗೆ ಅವಮಾನ ಮಾಡಲಾಗಿದೆ, ನನ್ನ ಸಹೋದರನಿಗೆ ಮೀರ್ ಜಾಫರ್ ಎಂಬ ಹೆಸರನ್ನು ಇಡಲಾಗಿದೆ. ನಿಮ್ಮ ಮಂತ್ರಿಗಳು ಸಂಸತ್ತಿನಲ್ಲಿ ನನ್ನ ತಾಯಿಯನ್ನು ಅವಮಾನಿಸುತ್ತಾರೆ. ನಿಮ್ಮ ಸಿಎಂ ಒಬ್ಬರು ರಾಹುಲ್ ಗಾಂಧಿಗೆ ಅವರ ತಂದೆ ಯಾರೆಂದು ತಿಳಿದಿಲ್ಲ ಎನ್ನುತ್ತಾರೆ, ಆದರೆ ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಪ್ರಿಯಾಂಕಾ ಹೇಳಿದರು.

"ಅಂತಹವರನ್ನು ಸಂಸತ್ತಿನಿಂದ ಅನರ್ಹಗೊಳಿಸುವುದಿಲ್ಲ, ಜೈಲಿಗೆ ಕಳುಹಿಸುವುದಿಲ್ಲ ಹಾಗೂ  ಅವರನ್ನು ವರ್ಷಗಟ್ಟಲೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲಾಗಿಲ್ಲ, ಅವರು ನನ್ನ ಕುಟುಂಬವನ್ನು ಸಾಕಷ್ಟು ಬಾರಿ ಅವಮಾನಿಸಿದ್ದಾರೆ, ಆದರೆ ನಾವು ಮೌನವಾಗಿದ್ದೇವೆ'' ಎಂದು  ಪ್ರಿಯಾಂಕಾ ಹೇಳಿದರು.

"ಬಿಜೆಪಿಗೆ ಭಯವಾಗಿದೆ.  ಏಕೆಂದರೆ ರಾಹುಲ್ (ಗಾಂಧಿ) ಪ್ರಶ್ನೆಗಳನ್ನು ಎತ್ತಿದ್ದಾರೆ.  ಅದಕ್ಕೆ ಅವರಲ್ಲಿ (ಬಿಜೆಪಿ) ಉತ್ತರವಿಲ್ಲ… ಒಬ್ಬ ವ್ಯಕ್ತಿಯ ಬಾಯಿ ಮುಚ್ಚಿಸಲು ಇಷ್ಟೆಲ್ಲಾ ಮಾಡಿರುವುದು ನಗು ತರಿಸುತ್ತದೆ… ಈ ದೇಶದ ಪ್ರಧಾನಿ ಒಬ್ಬ ಹೇಡಿ” ಎಂದು ರಾಜ್‌ಘಾಟ್‌ನಲ್ಲಿ ನಡೆದ ಸತ್ಯಾಗ್ರಹದಲ್ಲಿ  ಪ್ರಿಯಾಂಕಾ ಗಾಂಧಿ ಹೇಳಿದರು.

Similar News