ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಬಿಲ್ಲವರಿಗೆ ಅನ್ಯಾಯ: ಪ್ರಣವಾನಂದ ಸ್ವಾಮೀಜಿ

Update: 2023-03-26 10:28 GMT

ಮಂಗಳೂರು,ಮಾ.26: ರಾಜ್ಯದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ ಪಕ್ಷ ಬಿಡುಗಡೆಗೊಳಿಸಿರುವ ಮೊದಲ ಪಟ್ಟಿಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಬಿಲ್ಲವ ಸಮುದಾಯದ ಟಿಕೆಟ್ ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಲ್ಲವ ಸಮುದಾಯದ ಹತ್ತು ಮಂದಿಗೆ ಟಿಕೆಟ್ ನೀಡುವಂತೆ ಕೇಳಿದ್ದೆವು. ಆದರೆ ಆರು ಮಂದಿಗೆ ಸಿಕ್ಕಿದೆ. ಎರಡನೇ ಪಟ್ಟಿಯಲ್ಲಿ ಉಳಿದ ನಾಲ್ಕು ಮಂದಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

ನಾವು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜ್ಯದಲ್ಲಿ ತಲಾ 10 ಕ್ಷೇತ್ರಗಳಲ್ಲಿ ಬಿಲ್ಲವರಿಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಕೇಳಿದ್ದೇವು. ಕಾಂಗ್ರೆಸ್ ಮಾತ್ರ ಮೊದಲ ಹಂತದ ಪಟ್ಟಿ ಬಿಡುಗಡೆಗೊಳಿಸಿದೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ವಿಚಾರದ ಬಗ್ಗೆ ಯೋಚಿಸಲಾಗುವುದು. ಇದು ಎಲ್ಲ ಪಕ್ಷಗಳಿಗೂ ನಮ್ಮ ಸಮುದಾಯದವರನ್ನು ಕಡೆಗಣಿಸದಂತೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಿದರು.

ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಒಬ್ಬರಿಗೆ ಮಾತ್ರ ಸೀಟ್ ನೀಡಿದೆ. ಇದು ಹಿಂದೆ ಇದ್ದದ್ದೆ ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ ಎರಡು ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. ಈಗಾಗಲೇ 11 ಮಂದಿ ಅರ್ಜಿ ಹಾಕಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಇವರು ಪಕ್ಷಕ್ಕಾಗಿ ಬಹಳಷ್ಟು ದುಡಿದವರು. ನಮಗೆ ವ್ಯಕ್ತಿ ಮುಖ್ಯವಲ್ಲ. ಸಮುದಾಯದಲ್ಲಿ ಸಮರ್ಥರಾದ ಯಾರಿಗೂ ಕೊಟ್ಟರೂ ಸಂತೋಷವೇ ಎಂದರು.

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಹೀಗೆ ಮಾಡಿದ್ದು ಸರಿಯಲ್ಲ. ನಮ್ಮ ಸಮುದಾಯದವರಿಗೆ ಟಿಕೆಟ್  ಕೊಟ್ಟರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.

ನಿಗಮಕ್ಕೆ ಅನುದಾನ ಘೋಷಣೆ ಮಾಡದಿದ್ದರೆ ಅಪಾಯ: ರಾಜ್ಯ ಸರಕಾರ ಇನ್ನು ನಾಲ್ಕು ದಿನಗಳಲ್ಲಿ ಬ್ರಹ್ಮಶ್ರೀ ನಾರಾಯಣ ನಿಗಮಕ್ಕೆ ಅನುದಾನ ಸೇರಿದಂತೆ ಬಿಲ್ಲವ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇನ್ನು 4-5 ದಿನಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಅಪಾಯ ಇದೆ ಎಂದು ಹೇಳಿದರು.

ಜಾಸ್ತಿ ಸೀಟು ಕೊಟ್ಟ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ ಈ ಬಗ್ಗೆ ಈಗ ಏನನ್ನು ಹೇಳುವುದಿಲ್ಲ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ ಹಣ ಕಳೆದುಕೊಂಡಿರುವ ಕೆಲವು ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಅವರೆಲ್ಲರನ್ನು ಕರೆದು ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಮುದಾಯದ ಮುಖಂಡರಾದ ಜಿತೇಂದ್ರ ಸುವರ್ಣ, ಲೋಕನಾಥ ಪೂಜಾರಿ ಮತ್ತು ಸುರೇಶ್ಚಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

Similar News