ಮತದಾನ ಬಹಿಷ್ಕಾರದ ಎಚ್ಚರಿಕೆ: ಮಡಾಮಕ್ಕಿ ಗ್ರಾಮಸಭೆ ಮುಂದೂಡಿಕೆ

Update: 2023-03-26 13:09 GMT

ಕುಂದಾಪುರ: ಚುನಾವಣಾ ಬಹಿಷ್ಕಾರದ ಎಚ್ಚರಿಕೆಗೆ ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಸ್ಪಂದಿಸದ ಕಾರಣ ಶುಕ್ರವಾರ ನಿಗದಿಯಾಗಿದ್ದ ಮಡಾಮಕ್ಕಿ ಗ್ರಾಮ ಸಭೆಗೆ ಗ್ರಾಮಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನೇ ಮುಂದೂಡಲಾಗಿದೆ.

ಮಡಾಮಕ್ಕಿ ಗ್ರಾಮದ ಹಂಜ, ಕಾರಿಮನೆ, ಎಡ್ಮಲೆ, ಕುಂಟಾಮಕ್ಕಿ ಸುತ್ತ ಮುತ್ತಲಿನ ಭಾಗದಲ್ಲಿ 60ಕ್ಕೂ ಅಧಿಕ ಮನೆಗಳಿದ್ದು, 30ಕ್ಕೂ ಅಧಿಕ ಮತದಾರರಿದ್ದಾರೆ. ಇಲ್ಲಿಗೆ ಸಂಪರ್ಕಿಸುವ ರಸ್ತೆಯೇ ಸರಿ ಇಲ್ಲ. ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಹಕ್ಕುಪತ್ರಕ್ಕಾಗಿ ಜಂಟಿ ಸರ್ವೇಗೆ ಹಲವು ವರ್ಷ ಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸಲು ಗ್ರಾಮಸ್ಥರು ಒಂದು ವಾರದ ಗಡುವು ನೀಡಿದ್ದು, ಈಡೇರಿಸದಿದ್ದರೆ ಚುನಾವಣೆ ಬಹಿಷ್ಕರಿಸು ವುದಾಗಿ ಎಚ್ಚರಿಕೆ ನೀಡಿದ್ದರು.

ಆದರೆ ಗಡುವು ಮುಗಿದು ಹಲವು ದಿನಗಳೇ ಕಳೆದರೂ ಯಾವ ಅಧಿಕಾರಿ, ಜನಪ್ರತಿನಿಧಿಗಳು ಇತ್ತ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದುದರಿಂದ ಈ ಬಾರಿ ಚುನಾವಣೆ ಬಹಿಷ್ಕರಿಸಲು ಇಲ್ಲಿನ ಜನ ತೀರ್ಮಾನಿಸಿ ದ್ದಾರೆ. ಅಲ್ಲದೆ ಬೇಡಿಕೆ ಈಡೇರುವವರೆಗೆ ಗ್ರಾಮಸಭೆ ನಡೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಈ ಹಿಂದೆ ಅನೇಕ ಗ್ರಾಮಸಭೆಗಳಲ್ಲಿ ನಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದೇವೆ. ಅದು ಇನ್ನು ಕೂಡ ಬಗೆಹರಿದಿಲ್ಲ. ಹಾಗಾದರೆ ಈ ಗ್ರಾಮಸಭೆಯ ಉಪಯೋಗ ಏನು? ಇಲ್ಲಿ ಪ್ರಸ್ತಾಪಿಸುವ ಯಾವ ಸಮಸ್ಯೆಯೂ ಈಡೇರದಿದ್ದರೆ ಯಾಕಾಗಿ ಗ್ರಾಮಸಭೆ ನಡೆಯಬೇಕು ಎಂದು ಮಡಾಮಕ್ಕಿ ಗ್ರಾಪಂ ಕಚೇರಿ ಎದುರು ಜಮಾಯಿಸಿದ ಹಂಜ, ಎಡ್ಮಲೆ, ಕಾರಿಮನೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಅಮಾಸೆಬೈಲು ಠಾಣಾಧಿಕಾರಿ ಸದಾಶಿವ ಗವರೋಜಿ ಆಗಮಿಸಿ, ಗ್ರಾಮಸ್ಥರನ್ನು ಸಮಾಧಾನಪಡಿಸಿ, ಗ್ರಾಮಸಭೆ ನಡೆಸಲು ಅನುವು ಮಾಡಿಕೊಡು ವಂತೆ ಕೇಳಿಕೊಂಡರು. ಆದರೆ ಗ್ರಾಮಸ್ಥರು ಪಟ್ಟು ಬಿಡದ ಹಿನ್ನೆಲೆ ಯಲ್ಲಿ ಗ್ರಾಮಸಭೆಯನ್ನು ಮುಂದೂಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ದಯಾನಂದ ಪೂಜಾರಿ, ಸದಸ್ಯರು, ಪಿಡಿಒ, ಸಿಬಂದಿ, ಗ್ರಾಮಸ್ಥರು ಹಾಜರಿದ್ದರು.

Similar News