ಕಾಂಗ್ರೆಸ್ ಸಾಧನೆ ಮುಂದಿಟ್ಟು ಡಬಲ್ ಇಂಜಿನ್ ಸರಕಾರದಿಂದ ಪ್ರಚಾರ: ಸುಧೀರ್ ಕುಮಾರ್ ಮುರೋಳಿ

Update: 2023-03-26 15:07 GMT

ಕುಂದಾಪುರ, ಮಾ.26: ಕಾಂಗ್ರೆಸ್ ಈ ಹಿಂದೆ ಮಾಡಿದ ಸಾಧನೆಗಳನ್ನು ತನ್ನದೆಂಬಂತೆ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದ್ದು ಜನರಿಗೆ ಉಪಯೋಗವಾಗುವ ಯಾವುದೇ ಕಾರ್ಯಕ್ರಮ ಡಬ್ಬಲ್ ಇಂಜಿನ್ ಸರಕಾರ ದಿಂದ ನಡೆದಿಲ್ಲ. ಕೇವಲ ಹಿಜಾಬ್, ಹಲಾಲ್, ಜಟ್ಕಾ, ಅಝಾನ್ ಮೊದಲಾದ ವಿಚಾರವನ್ನಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ.

ಕೋಟ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರವಿವಾರ ಮಂದರ್ತಿ ಸಮೀಪದ ಸಭಾಂಗಣದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ್ದಲ್ಲದೆ, ಸ್ತ್ರೀ ಸಬಲೀಕರಣದ ಮೂಲಕ ಮಹಿಳೆ ಯರ ವಿವೇಚನಾಶಕ್ತಿ ಹೆಚ್ಚಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ. ಮಹಿಳೆಯರು ತಮ್ಮ ಸ್ವಂತ ಶಕ್ತಿ ಮೇಲೆ ನಿಲ್ಲಲು ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳು ಕಾಂಗ್ರೆಸ್ ಮೂಲಕ ಸಾಧ್ಯವಾಗಿದೆ. ಮೀಸಲಾತಿ ಮೂಲಕ ಮಹಿಳೆಯರು ರಾಜಕೀಯ ದಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನಕ್ಕೇರಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮಮತಾ ಶೆಟ್ಟಿ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಮಿತಿ ಮೀರಿದ್ದು ಜನಸಾಮಾನ್ಯರು ಹೈರಾಣಾಗಿ ದ್ದಾರೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಸಂಘಟಿತರಾಗುವ ಮೂಲಕ ಉತ್ತಮ ಆಡಳಿತ ನೀಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರದ ಪೈಕಿ ಕುಂದಾಪುರ ಕ್ಷೇತ್ರ ಇನ್ನೂ ಅಭಿವೃದ್ಧಿಯಿಂದ ಹಿಂದು ಳಿದಿದೆ. ಕುಂದಾಪುರ ವಲಯದ 22 ಸರಕಾರಿ ಶಾಲೆಯಲ್ಲಿ ಶೂನ್ಯ ಶಿಕ್ಷಕರಿದ್ದಾರೆ. ರಸ್ತೆ, ಡ್ಯಾಂ, ಸೇತುವೆ ಇದು ಮಾತ್ರ ಅಭಿವೃದ್ಧಿಯಲ್ಲ. ಇಚ್ಚಾಶಕ್ತಿಯುಳ್ಳ ಕ್ರಿಯಾಶೀಲ ವ್ಯಕ್ತಿತ್ವದ ಹೊಸ ಮುಖ ಶಾಸಕರಾಗಿ ಅಗತ್ಯವಿದ್ದು ಕಾಂಗ್ರೆಸ್ ಆಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ಕಂಡು ಕೊಳ್ಳಬೇಕು ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾ ಪುರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಮಹೇಶ್ ಹೆಗ್ಡೆ ಮೊಳಹಳ್ಳಿ, ಮೀನಾಕ್ಷಿ ಮಾಧವ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ರೋಶನ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರತಿನಿಧಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಪಿ.ಸುವರ್ಣ ಸ್ವಾಗತಿಸಿ ದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ಕಲಾವಿದರು ನಗಿಸುತ್ತಾರೆ. ಆದರೆ ರಾಜಕೀಯದಲ್ಲಿ ನಳೀನ್ ಕುಮಾರ್ ಓರ್ವ ವಿಧೂಷಕ ಇದ್ದಂತೆ. ಕಟೀಲ್ ಅಭಿವೃದ್ಧಿ ಚರ್ಚೆ ಬೇಡ ಲವ್ ಜಿಹಾದ್ ಬಗ್ಗೆ ಆಲೋಚಿಸಿ ಎಂದು ಹೇಳಿಕೆ ನೀಡುತ್ತಾರೆ. ಆದರೆ ಜನರಿಗೆ ಬೇಕಿರುವುದು ಅಭಿವೃದ್ಧಿ. ತಿನ್ನುವ ಅಡುಗೆ ಉಪ್ಪಿಗೂ ಕೂಡ ನಾಲ್ಕು ಪಟ್ಟು ದರ ಏರಿಸಿದ ಬಿಜೆಪಿಯು ಜನವಿರೋಧಿ ನೀತಿ ಅನುಸರಿಸಿದೆ.

-ಸುಧೀರ್ ಕುಮಾರ್ ಮುರೋಳಿ

"ಕುಂದಾಪುರ ಕ್ಷೇತ್ರದಲ್ಲಿ 24 ವರ್ಷಗಳಿಂದ ಒಬ್ಬರೆ ಶಾಸಕರಿದ್ದಾರೆ. ಬದಲಾವಣೆ ಜಗದ ನಿಯಮ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನ ಗೆಲ್ಲಿಸಿದಲ್ಲಿ ವಾರಾಹಿ ನೀರಾವರಿ ಯೋಜನೆ, ಅಕ್ರಮ-ಸಕ್ರಮ, 94ಸಿ ಡೀಮ್ಡ್ ಸಮಸ್ಯೆ ಪರಿಹಾರಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ".

-ದಿನೇಶ್ ಎಂ.ಹೆಗ್ಡೆ, ಕಾಂಗ್ರೆಸ್ ಅಭ್ಯರ್ಥಿ, ಕುಂದಾಪುರ ವಿಧಾನಸಭಾ ಕ್ಷೇತ್ರ

Similar News