ಮಂಗಳೂರು: ಬೀಡಿ ಕಾರ್ಮಿಕರ ಪ್ರತಿಭಟನೆ

Update: 2023-03-28 12:35 GMT

ಮಂಗಳೂರು, ಮಾ.28: ಅಖಿಲ ಭಾರತ ಬೀಡಿ ಫೆಡರೇಶನ್ (ಸಿಐಟಿಯು)ನ ಕರೆಯಂತೆ ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈೀಡೇರಿಸುವಂತೆ ಒತ್ತಾಯಿಸಿ ಮಂಗಳವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಶೀಲ್ದಾರರ ಮೂಲಕ ಕೇಂದ್ರ ಸರಕಾರಕ್ಕೆ 8 ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್‌ನ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯಿಂದ ದೇಶದ 3 ಕೋಟಿ ಬೀಡಿ ಕಾರ್ಮಿಕರು ಬದುಕು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಕನಿಷ್ಟ ವೇತನ ನಿಗದಿಗೊಳಿಸುತ್ತಿಲ್ಲ. 1966ರ ಬೀಡಿ ಮತ್ತು ಸಿಗಾರ್ ಕಾಯ್ದೆ,  1976ರ ಬೀಡಿ ಕಾರ್ಮಿಕರ ಕಲ್ಯಾಣ ಕಾಯ್ದೆ, 1970ರ ಸೆಸ್ ಕಾಯ್ದೆಗಳನ್ನು ಸಂಹಿತೆಯ ಹೆಸರಿನಲ್ಲಿ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಜಿಲ್ಲೆಯ 8 ಶಾಸಕರು, ಸಂಸದರು ಬೀಡಿ ಕಾರ್ಮಿಕ ಸಮಸ್ಯೆಗಳ ಬಗ್ಗೆ ಶಾಸನ ಸಭೆಗಳಲ್ಲಿ ಚಕಾರವೆತ್ತದಿರುವುದು ಖಂಡನೀಯ. ಬೀಡಿ ಕೈಗಾರಿಕೆಯ ಉಳಿವಿಗಾಗಿ ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ತೀವ್ರ ಹೋರಾಟವನ್ನು ನಡೆಸಬೇಕಾಗಿದೆ ಎಂದರು.

ಜಿಲ್ಲೆಯ ಹಿರಿಯ ಕಾರ್ಮಿಕ ಮುಂದಾಳು ಯು.ಬಿ.ಲೋಕಯ್ಯ ಮಾತನಾಡಿ ಬೀಡಿ ಕೈಗಾರಿಕೆಯು ಜಿಲ್ಲೆಯ ಜನರಿಗೆ ಬದುಕನ್ನು ನೀಡಿದೆ. ಹಲವಾರು ಧೀರ ಹೋರಾಟಗಳಿಂದ ಪಡೆದ ಸೌಲಭ್ಯಗಳನ್ನು ಕಾಪಾಡಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಜಯಂತಿ ಶೆಟ್ಟಿ, ಸದಾಶಿವ ದಾಸ್, ಜಯಂತ ನಾಯ್ಕ್, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಸುಂದರ ಕುಂಪಲ, ನೋಣಯ್ಯ ಗೌಡ, ಬಾಬು ಪಿಲಾರ್, ಭಾರತಿ ಬೋಳಾರ್, ಭವಾನಿ ವಾಮಂಜೂರು, ರಾಧಾ ಮೂಡುಬಿದಿರೆ   ವಹಿಸಿದ್ದರು.

Similar News