ಉಡುಪಿ- ಕಾಸರಗೋಡು 440ಕೆವಿ ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿ: ಸರ್ವೇ ಕಾರ್ಯ ನಡೆಸಲು ಸಹಕಾರ ನೀಡುವಂತೆ ಆದೇಶ

Update: 2023-03-28 12:43 GMT

ವಿಟ್ಲ: ಉಡುಪಿ- ಕಾಸರಗೋಡು 440ಕೆವಿ ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಗೆ ಸಂಬಂಧಿಸಿ ಬಂಟ್ವಾಳ ತಾಲೂಕು ವ್ಯಾಪ್ತಿಯ ಜಮೀನಿನ ಸರ್ವೇ ಮಾಡಲು ಕರ್ನಾಟಕ ಉಚ್ಚ ನ್ಯಾಯಾಲಯ ಸೂಚಿಸಿದ ಪ್ರಕಾರ 69 ಮಂದಿ ಅರ್ಜಿದಾರರು ಸರ್ವೇ ಕಾರ್ಯಕ್ಕೆ  ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ಉಚ್ಛ ನ್ಯಾಯಾಲಯದ ಆದೇಶದಂತೆ ತಹಸೀಲ್ದಾರರು, ಭೂದಾಖಲೆಗಳ ಸಹಾಯಕ ನಿರ್ದೇಶಕರು, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ತಂಡ ಸರ್ವೆ ಕಾರ್ಯ ನಡೆಸಲು ಯಾವುದೇ ವ್ಯಕ್ತಿ, ಸಂಸ್ಥೆ, ಸಂಘ ಮತ್ತು ಸಂಘಟನೆಗಳಿಂದ ಅಡಚಣೆ ಮಾಡಬಾರದು. ಸರ್ವೆ ನಡೆಸಲು ಎಲ್ಲರೂ ಸಂಪೂರ್ಣ ಸಹಕರಿಸಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾ.27ರಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯ ಮಾ.15 ಹಾಗೂ 20ರಂದು ವಿಚಾರಣೆಯನ್ನು ನಡೆಸಿ, ಆದೇಶ ಹೊರಡಿಸಿದ ಪ್ರಕಾರ ಮಾ.27ರಂದು ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಹಾಜರಾಗಿ, ಜಮೀನುಗಳಿಗೆ ತಹಸೀಲ್ದಾರರು ಹೋಗಿ, ಡಿಜಿಟಲ್ ಗ್ಲೋಬಲ್ ಪೆÇಸಿಷನಿಂಗ್ ಸರ್ವೇ ವಿಧಾನ ಬಳಸಿ ತಾಲೂಕು ಸರ್ವೇಯರ್ ಸಮೀಕ್ಷೆಯನ್ನು ನಡೆಸಬೇಕು. ಮುಂದಿನ ವಿಚಾರಣೆಯ ಸಮಯ ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಾಲೂಕು ಸರ್ವೇಯರ್ ಸಲ್ಲಿಸುವ ಸಮೀಕ್ಷೆಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Similar News