ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ: ಸಿಸಿ ಕ್ಯಾಮರಾ ದೃಶ್ಯಾವಳಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಮನವಿ

Update: 2023-03-28 14:08 GMT

ಮಂಗಳೂರು, ಮಾ.28: ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಯು 6ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ನಡೆಯಿತು.

ರಾಜ್ಯ ಸರಕಾರದಿಂದ ವಿಶೇಷವಾಗಿ ನೇಮಕಗೊಂಡಿರುವ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಅವರು ಹತ್ಯೆಗೀಡಾದ ವಿನಾಯಕ ಬಾಳಿಗಾ ಪರವಾಗಿ ವಾದಿಸಿ ‘ಪ್ರಮುಖ ಆರೋಪಿ ನರೇಶ್ ಶೆಣೈಯು ಸಾಕ್ಷಿದಾರರನ್ನು ಕಾಶ್ಮೀರ, ಕನ್ಯಾಕುಮಾರಿ ಮತ್ತಿತರ ಕಡೆಗಳಿಗೆ ಕರೆದುಕೊಂಡು ಹೋದ ಬಗ್ಗೆ ದಾಖಲೆಯಿದೆ. ಇದು ತನ್ನ ಪರವಾಗಿ ಹೇಳಿಕೆ ನೀಡಲು ಸಾಕ್ಷಿದಾರರ ಮೇಲೆ ಒತ್ತಡ ಹೇರುವುದರ ಭಾಗವಾಗಿ ಕಂಡು ಬರುತ್ತದೆ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ಸಾಕ್ಷಿದಾರರೊಂದಿಗೆ ಆರೋಪಿ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಹಾಗಾಗಿ ಒಂದನೇ ಆರೋಪಿ ನರೇಶ್ ಶೆಣೈ ಮತ್ತು ಸಾಕ್ಷಿದಾರರ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಬೇಕು. ಅಲ್ಲದೆ ಈ ಕುರಿತ ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ವೇಳೆ ಸತ್ಯಾಂಶ ಬೆಳಕಿಗೆ ಬರಲಿದೆ’ ಎಂದರು.

ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ ‘ಇದು ಕಾನೂನಿನ ಪರಿಧಿಯೊಳಗೆ ಬರುವುದಿಲ್ಲ’ ಎಂದರು.
‘ಈ ಹಿಂದೆ ಎರಡು-ಮೂರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಮತ್ತು ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಲು ಅನುಮತಿ ನೀಡಿದೆ’ ಎಂದು ಸರಕಾರಿ ಪರ ನ್ಯಾಯವಾದಿ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

ಹತ್ಯೆಗೀಡಾದ ವಿನಾಯಕ ಬಾಳಿಗಾರ ಸಹೋದರಿ ಅನುರಾಧಾ ಬಾಳಿಗಾ ಮತ್ತು ಅವರಿಗೆ ಧೈರ್ಯ ತುಂಬುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್ ಅವರಿಗೆ 2023ರ ಜನವರಿ 17ರ ಬಳಿಕ ಆರೋಪಿಗಳ ಕಡೆಯಿಂದ ವಾಟ್ಸ್‌ಆ್ಯಪ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದರೂ ಕೂಡ ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ. ಇಂತಹ ವ್ಯವಸ್ಥೆಯು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ. ಹಾಗಾಗಿ ಈ ದೂರಿನ ಬಗ್ಗೆಯೂ ಸಮರ್ಪಕ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಎಸ್.ಬಾಲಕೃಷ್ಣನ್ ಒತ್ತಾಯಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸಿಸಿ ಕ್ಯಾಮರಾದ ದೃಶ್ಯಾವಳಿ ಮತ್ತು ಮೊಬೈಲ್ ವಶಕ್ಕೆ ಸಂಬಂಧಿಸಿದಂತೆ ಕಾಲವಕಾಶ ನೀಡಿದರಲ್ಲದೆ ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದರು.

ನಗರದ ವೆಂಕಟರಮಣ ದೇವಸ್ಥಾನದ ಬಳಿ 2016ರ ಮಾರ್ಚ್ 21ರಂದು ವಿನಾಯಕ ಬಾಳಿಗಾರನ್ನು ಮಾರಕಾಸ್ತ್ರದಿಂದ ಹತ್ಯೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಕ ಬಾಳಿಗಾರ ಸಹೋದರಿ ಅನುರಾಧಾ ಬಾಳಿಗಾ ನೀಡಿದ ದೂರಿನಂತೆ ಬರ್ಕೆ ಪೊಲೀಸರು ನಮೋ ಬ್ರಿಗೇಡ್‌ನ ಮುಖ್ಯಸ್ಥ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶ್ಚಿತ್ ದೇವಾಡಿಗ, ಶೈಲೇಶ್, ಮಂಜುನಾಥ್ ಶೆಣೈ, ವಿಘ್ನೇಶ್ ನಾಯಕ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ರಾಜಕೀಯ ಒತ್ತಡದಿಂದ ಕೊಲೆ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಆದಾಗ್ಯೂ ಪ್ರತಿಭಟನೆ, ರ‍್ಯಾಲಿ ನಡೆದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕೆಲವು ಸಮಯದ ಬಳಿಕ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು.

ಆರೋಪಿಗಳ ಪೈಕಿ ವಿಘ್ನೇಶ್ ನಾಯಕ್ ಎಂಬಾತ 2020ರ ನವೆಂಬರ್‌ನಲ್ಲಿ ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಸ್ಪಷ್ಟಗೊಂಡಿರಲಿಲ್ಲ.

ಕೊಲೆ ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಪೊಲೀಸರ ಮೇಲೆ ರಾಜಕಾರಣಿಗಳು ಒತ್ತಡ ಹೇರುತ್ತಿದ್ದಾರೆ ಎಂದು ‘ಸಮಾನ ಮನಸ್ಕ ದೇಶಪ್ರೇಮಿ’ ಸಂಘಟನೆಯ ಪ್ರಮುಖರು ಆರೋಪಿಸಿ ರ‍್ಯಾಲಿ-ಪ್ರತಿಭಟನೆಯ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ತನಿಖೆಗೆ ‘ಎಸ್‌ಐಟಿ’ ರಚಿಸಬೇಕು ಎಂದು ಆಗ್ರಹಿಸಿದ್ದರು.

ಈ ಮಧ್ಯೆ ರಾಜ್ಯ ಸರಕಾರವು 2022ರ ನವೆಂಬರ್ 2ರಂದು ಹಿರಿಯ ನ್ಯಾಯವಾದಿ ಎಸ್. ಬಾಲಕೃಷ್ಣನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ಸರಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಿಸಿತ್ತು. ಬಳಿಕ 2023ರ ಜನವರಿ 3,4,5ರಂದು ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭಿಸಲಾಗಿತ್ತು. ಇದೀಗ ಮಂಗಳವಾರ ಮತ್ತೆ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದೆ.

Similar News