ಯುವಜನತೆ ಡ್ರಗ್ಸ್ ದಾಸರಾಗದಂತೆ ಎಚ್ಚರ ಅಗತ್ಯ: ಅಣ್ಣಾಮಲೈ

Update: 2023-03-28 14:27 GMT

ಉಡುಪಿ, ಮಾ.28: ಕಷ್ಟ, ಸುಖದಲ್ಲಿ ಇಂದು ಡ್ರಗ್ಸ್ ಸೇರ್ಪಡೆಯಾಗುತ್ತಿದೆ. ದುಃಖದ ಬೇನೆಯಲ್ಲಿ ಸೇವನೆ ಮಾಡುವವರು ಒಂದೆಡೆಯಾದರೆ ಸುಖದ ಅಮಲಿನಲ್ಲಿ ಸೇವನೆ ಮಾಡುವವರು ಮತ್ತೊಂದೆಡೆ ಇದ್ದಾರೆ. ಯುವಜನತೆ ಇದರ ದಾಸರಾಗದಂತೆ ಅಗತ್ಯ ಎಚ್ಚರ ವಹಿಸಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.

ಶ್ರೀಕೃಷ್ಣ ಸೇವಾ ಬಳಗ, ಅದಮಾರು ಮಠದ ಆಶ್ರಯದಲ್ಲಿ ಉಡುಪಿ ಪೂರ್ಣ ಪ್ರಜ್ಞ ಆಡಿಟೋರಿಯಂನಲ್ಲಿ ವಿಶ್ವಾರ್ಪಣಮ್ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಆಯೋಜಿಸಲಾದ ಯುವ ಸಂವಾದ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತ್ತಿದ್ದರು.

ಇಂದು ಭಾರತದಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಲಿದೆ. 2047ರಲ್ಲಿ ಭಾರತ ಅತೀ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹುಮ್ಮುಲಿದೆ. ಯಾವ ವೈಜ್ಞಾನಿಕ ಅಧ್ಯಯನವನ್ನೂ ನಡೆಸದೆ ಬ್ರಿಟೀಷರು ಭಾರತ ಹಾಗೂ ಪಾಕಿಸ್ತಾನದ ವಿಭಾಗ ಮಾಡಿದರು. ಪ್ರಜಾಪ್ರಭುತ್ವದ ಯಾವ ಕಲ್ಪನೆಯೂ ಇರಲಿಲ್ಲ. ಪ್ರಸ್ತುತ ಭಾರತ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದರು.

ನೆರೆಯ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ನ್ಯೂಕ್ಲಿಯರ್ ಆಯುಧ ಹಿಡಿದು ಕಾಯುತ್ತಿವೆ. ಯಾರಾದರೂ ಪ್ರಚೋದನೆ ಕೊಟ್ಟರೆ ಅಥವಾ ತಲೆಕೆಟ್ಟರೆ ದಾಳಿ ಮಾಡಲೂ ಹಿಂದೆ ಸರಿಯುವವರಲ್ಲ. ಶ್ರೀಲಂಕಾ, ಬಾಂಗ್ಲಾದೇಶದ ಆರ್ಥಿಕತೆಯೂ ಕುಸಿದಿದೆ. ಪಾಕಿಸ್ತಾನ ಹಾಗೂ ಚೀನಾ ಏಕಕಾಲದಲ್ಲಿ ನಮ್ಮ ಮೇಲೆ ದಾಳಿ ಮಾಡಿದರೂ ಅದನ್ನು ಎದುರಿಸುವ ಸೂಕ್ತ ರಕ್ಷಣಾ ವ್ಯವಸ್ಥೆ ನಮ್ಮಲ್ಲಿದೆ ಎಂದು ಅವರು ತಿಳಿಸಿದರು.

ಪ್ರಾಧ್ಯಾಪಕ ಡಾ.ಕರುಣಾಕರ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ದಾಮೋದರ ಶರ್ಮ ಸ್ವಾಗತಿಸಿದರು. ಕ್ಯಾ.ಬ್ರಿಜೇಶ್ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎ.ಪಿ.ಭಟ್ ವಂದಿಸಿದರು.

Similar News