ಸಮಾಜದಲ್ಲಿನ ಸವಾಲುಗಳನ್ನು ಸಾಕ್ಷಿಪ್ರಜ್ಞೆಯಾಗಿ ಮಂಡಿಸುವುದು ಅಗತ್ಯ: ವೆಂಕಟರಮಣ ಐತಾಳ್

Update: 2023-03-28 14:31 GMT

ಉಡುಪಿ: ಸಮಾಜದಲ್ಲಿ ನಡೆಯುತ್ತಿರುವ ಬಿಕ್ಕಟ್ಟು, ಸವಾಲು ಹಾಗೂ ಸಂಕಟಗಳನ್ನು ಎದುರಿಸುವ ಬಗ್ಗೆ ರಂಗ ಕಲಾವಿದರು ಜನರಿಗೆ ಹೇಳುವ ಕಾರ್ಯ ಮಾಡಬೇಕು. ಕಲಾವಿದರು, ಸಾಹಿತಿಗಳು ಸಾಕ್ಷಿಪ್ರಜ್ಞೆಯಾಗಿ ಇದನ್ನು ಸಮಾಜದ ಮುಂದೆ ಮಂಡಿಸಬೇಕು. ಈ ಮೂಲಕ ಕಲಾವಿದರು ಬೆಳೆಯುವುದ ರೊಂದಿಗೆ ಸಮಾಜಕ್ಕೆ ಅರಿವು ಕೊಡಬೇಕೆಂದು ರಂಗ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ಹೇಳಿದ್ದಾರೆ.

ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಉಡುಪಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಮಂಗಳವಾರ ನಡೆದ ರಂಗ ನಿರ್ದೇಶಕರೊಂದಿಗೆ ರಂಗ ಬದ್ಧತೆ ಮತ್ತು ಹವ್ಯಾಸಿ ರಂಗಭೂಮಿ ವರ್ತಮಾನದ ತಲ್ಲಣಗಳ ಕುರಿತ ರಥಬೀದಿ ರಂಗ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಆಶಯ ಮತ್ತು ಆಕೃತಿಗೆ ಇರುವ ಸಂಬಂಧ ಅತಿಮುಖ್ಯ. ಅದು ರಂಗಭೂಮಿ ಯಲ್ಲಿ ಇದ್ದಾಗ ಮಾತ್ರ ಕಲೆ ಆಗುತ್ತದೆ. ರೂಪ ಬದ್ಧತೆ ಮತ್ತು ವಿಷಯ ಬದ್ಧತೆಯ ಬೆಸುಗೆಯಿಂದ ಕಲೆ ಹುಟ್ಟುತ್ತದೆ. ಆ ಕಲೆ ಮಾತ್ರ ನಿಜವಾದ, ಅರ್ಥಪೂರ್ಣ ಮತ್ತು ಜವಾಬ್ದಾರಿಯುತ ರಂಗಭೂಮಿ ಆಗುತ್ತದೆ. ತಾನು ಬದುಕುತ್ತಿರುವ ಸಮುದಾಯ, ಸಮಾಜ, ಜಗತ್ತಿನ ಸುಖದುಃಖ, ಸಂಕಟ, ಬಿಕ್ಕಟ್ಟುಗಳ ಬಗ್ಗೆ ಹಂಚಿಕೊಳ್ಳುವುದು ಕಲಾವಿದನ ಕೆಲಸ. ಅದು ರಂಗಭೂಮಿ ಯಲ್ಲಿ ತೀವ್ರವಾಗಿ ರುತ್ತದೆ ಎಂದರು.

ನೇರವಾಗಿ, ಜೀವಂತವಾಗಿ, ಸಮುದಾಯಿಕವಾಗಿ ಕೆಲಸ ಮಾಡುವ ಕಲೆ ರಂಗಭೂಮಿ. ಆದುದರಿಂದ ಬೇರೆ ಎಲ್ಲ ಕಲೆಗಳಿಗಿಂತ ರಂಗಭೂಮಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ಆ ಜವಾಬ್ದಾರಿ ನಿಬಾಯಿಸಲು ಸಾಧ್ಯವೇ ಎಂಬುದರ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ರಂಗ ನಿರ್ದೇಶಕ ಐ.ಕೆ.ಬೋಳುವಾರ್ ಮಾತನಾಡಿ, ನಾಟಕವು ಸಮಕಾಲೀನ ರಾಜಕೀಯ ಚಿಂತನೆಗಳನ್ನು ರೂಪಿಸುವ ಹಾಗೂ ಚರ್ಚಿಸುವ ಶಕ್ತಿಯನ್ನು ಹೊಂದಿದೆ. ಐವತ್ತು ವರ್ಷದಷ್ಟು ದೂರಗಾಮಿ ಚಿಂತನೆಯನ್ನು ರಂಗಭೂಮಿ ಕಟ್ಟಿಕೊಡುತ್ತದೆ. ಪ್ರೇಕ್ಷಕರಲ್ಲಿ, ನೋಡುಗರಲ್ಲಿ ಯೋಚನಾ ಲಹರಿ, ಚಿಂತನೆಯನ್ನು ರಂಗಭೂಮಿ ಹುಟ್ಟುಹಾಕುತ್ತದೆ ಎಂದು ಹೇಳಿದರು.

ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ರಂಗಭೂಮಿ ಸಂದೇಶವನ್ನು ವಾಚಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

Similar News