ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಸುಸೈಡ್ ನೋಟ್‌ನಲ್ಲಿ ಸಹಪಾಠಿಯ ಹೆಸರು ಉಲ್ಲೇಖ

Update: 2023-03-28 17:31 GMT

ಮುಂಬೈ, ಮಾ. 28: ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ಸುಸೈಡ್ ನೋಟ್‌ನಲ್ಲಿ ತನ್ನ ಓರ್ವ ಸಹಪಾಠಿಯ ಹೆಸರು ಉಲ್ಲೇಖಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.

ದರ್ಶನ್ ಸೋಲಂಕಿ ಫೆಬ್ರವರಿ 12ರಂದು ಹಾಸ್ಟೆಲ್ ಕಟ್ಟಡದ 7ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.  ಅಹ್ಮದಾಬಾದ್ ಮೂಲದ, 18 ವರ್ಷದ ಸೋಲಂಕಿ ಐಐಟಿ ಬಾಂಬೆಯಲ್ಲಿ ಮೊದಲ ವರ್ಷದ ತಂತ್ರಜ್ಞಾನ (ರಾಸಾಯನಿಕ)ದ ಪದವಿ ವಿದ್ಯಾರ್ಥಿಯಾಗಿದ್ದ.

ಐಐಟಿ ಬಾಂಬೆಯಲ್ಲಿ ಸೋಲಂಕಿ ಜಾತಿ ತಾರತಮ್ಯ ಎದುರಿಸಿದ್ದ ಎಂದು ಆತನ ಕುಟುಂಬ ಪ್ರತಿಪಾದಿಸಿತ್ತು. ಆದರೆ, ಐಐಟಿ ಬಾಂಬೆ ರೂಪಿಸಿದ ತನಿಖಾ ಸಮಿತಿ ಸೋಲಂಕಿಯ ಆತ್ಮಹತ್ಯೆ ಹಿಂದೆ ಜಾತಿ ತಾರತಮ್ಯವನ್ನು ನಿರಾಕರಿಸಿತ್ತು. ಅದಕ್ಕೆ ಬದಲಾಗಿ ಕಲಿಕೆಯಲ್ಲಿನ ಹಿಂದುಳಿಕೆ ಸೋಲಂಕಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಹೇಳಿತ್ತು.

ಪೊಲೀಸರು ಮಂಗಳವಾರ ಸೋಲಂಕಿಯ ಹಾಸ್ಟೆಲ್ ಕೊಠಡಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಸುಸೈಡ್ ನೋಟ್ ಪತ್ತೆಯಾಗಿದೆ.
‘‘ಒಂದು ಮೇಜಿನ ಮೇಲೆ ಕೆಲವು ಪುಸ್ತಕಗಳು ಹಾಗೂ ಪರಿಹರಿಸಿದ ಪ್ರಶ್ನೆ ಪತ್ರಿಕೆ ಇತ್ತು...ಮೇಜಿನ ಕೆಳಗಡೆ ಪತ್ರವೊಂದು ಪತ್ತೆಯಾಗಿತ್ತು. ಅದರಲ್ಲಿ ... ನನ್ನನ್ನು ಕೊಂದ’’ ಎಂದ ಸಹಪಾಠಿಯ ಹೆಸರು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಸೋಲಂಕಿ ಪತ್ರದಲ್ಲಿ ಉಲ್ಲೇಖಿಸಿದ ಸಹಪಾಠಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.

Similar News