15ಕೋ.ರೂ.ವಂಚನೆ ಪ್ರಕರಣದಲ್ಲಿ ಗುಜರಾತಿನ ವಂಚಕ ಕಿರಣ್ ಭಾಯಿ ಪಟೇಲ್ ಪತ್ನಿಯ ಬಂಧನ‌

Update: 2023-03-28 17:41 GMT

‌ಅಹ್ಮದಾಬಾದ್, ಮಾ.28: ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿಯ ಸೋಗಿನಲ್ಲಿ ಜಮ್ಮು-ಕಾಶ್ಮೀರ ಆಡಳಿತವನ್ನು ಯಾಮಾರಿಸಿದ್ದ ವಂಚಕ ಕಿರಣಭಾಯಿ ಪಟೇಲ್ನ ಪತ್ನಿಯನ್ನು 15 ಕೋ.ರೂ.ವಂಚನೆ ಪ್ರಕರಣದಲ್ಲಿ ಅಹ್ಮದಾಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಾಜಿ ಬಿಜೆಪಿ ಸಚಿವ ಜವಾಹರ ಚಾವ್ಡಾರ ಸೋದರ ಜಗದೀಶ ಚಾವ್ಡಾ ಅವರು ಮಾಲಿನಿ ಪಟೇಲ್ ಮತ್ತು ಕಿರಣಭಾಯಿ ಪಟೇಲ್ ವಿರುದ್ಧ ಮಾ.22 ರಂದು ಪ್ರಕರಣವನ್ನು ದಾಖಲಿಸಿದ್ದರು.

ಇದು ಕಿರಣ್ ಪಟೇಲ್ ವಿರುದ್ಧ ನಾಲ್ಕನೇ ಪ್ರಕರಣವಾಗಿದ್ದು,ಈ ಪೈಕಿ ಮೂರು ಪ್ರಕರಣಗಳು ಕ್ರಿಮಿನಲ್ ನಂಬಿಕೆ ದ್ರೋಹ,ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಲ್ಲಿ ಆತನ ತವರು ರಾಜ್ಯ ಗುಜರಾತಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಮಾಲಿನಿ ಪಟೇಲ್ ಮತ್ತು ಕಿರಣ ಪಟೇಲ್ ಕಳೆದ ವರ್ಷ ಅಹ್ಮದಾಬಾದ್ನ ಶಿಲಾಜ್ ಪ್ರದೇಶದಲ್ಲಿರುವ ಚಾವ್ಡಾರ ವಸತಿ ಆಸ್ತಿಯನ್ನು ನವೀಕರಿಸುವ ಭರವಸೆ ನೀಡಿ 15 ಕೋ.ರೂ.ಗಳನ್ನು ವಂಚಿಸಿದ್ದರು ಎಂದು ಇತ್ತೀಚಿನ ಪ್ರಕರಣದಲ್ಲಿಯ ಎಫ್ಐಆರ್ನಲ್ಲಿ ಹೇಳಲಾಗಿದೆ. ಕಿರಣ ಪಟೇಲ್ ತಾನು ‘ಬೃಹತ್ ಅದಾನಿ ಯೋಜನೆ ’ಯೊಂದಿಗೆ ಸಂಬಂಧವನ್ನು ಹೊಂದಿರುವ,ಪ್ರಧಾನಿ ಕಚೇರಿಯಲ್ಲಿ ಕ್ಲಾಸ್ 1 ಅಧಿಕಾರಿಯೆಂದು ಹೇಳಿಕೊಂಡು ಚಾವ್ಡಾರಿಗೆ ಮೋಸ ಮಾಡಿದ್ದಾನೆ ಎಂದೂ ಆರೋಪಿಸಲಾಗಿದೆ.

Similar News