ಮೆಕ್ಸಿಕೊ: ವಲಸಿಗರ ಬಂಧನ ಕೇಂದ್ರದಲ್ಲಿ ಭೀಕರ ಅಗ್ನಿದುರಂತ; ಕನಿಷ್ಠ 37 ಮಂದಿ ಮೃತ್ಯು

Update: 2023-03-28 18:10 GMT

ಮೆಕ್ಸಿಕೊ ಸಿಟಿ, ಮಾ.28:  ಮೆಕ್ಸಿಕೊ ದೇಶದ ರಾಜಧಾನಿಯಲ್ಲಿನ ವಲಸಿಗರ ಬಂಧನ ಕೇಂದ್ರದಲ್ಲಿ ಸೋಮವಾರ ರಾತ್ರಿ  ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ.

ಮೆಕ್ಸಿಕೊಸಿಟಿಯ  ರಸ್ತೆ ಬದಿಗಳಲ್ಲಿ  ಬೀಡುಬಿಟ್ಟಿದ್ದ ಸುಮಾರು 71 ವಲಸಿಗರನ್ನು ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡು ಬಂಧನ ಕೇಂದ್ರದಲ್ಲಿರಿಸಿದ್ದರು. ಇದಾದ ಕೆಲ ಹೊತ್ತಿನ  ಬಳಿಕ ಅಗ್ನಿ ಅವಘಡ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ದುರಂತಕ್ಕೆ ಸಂಬಂಧಿಸಿ ಮೆಕ್ಸಿಕೊದ ರಾಷ್ಟ್ರೀಯ ವಲಸೆ ಸಂಸ್ಥೆಯು ತನಿಖೆಯನ್ನು ಆರಂಭಿಸಿದೆ.. ಆದರೆ ಅವಘಡಕ್ಕೆ  ಕಾರಣ ಹಾಗೂ ಮೃತಪಟ್ಟವರು ಯಾವ ದೇಶಕ್ಕೆ ಸೇರಿದವರು ಎಂಬ ಬಗ್ಗೆ  ಈತನಕ ಅದು ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ. 
ಅಗ್ನಿಶಾಮಕದಳದಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರು  ಅಗ್ನಿದುರಂತಕ್ಕೀಡಾದ ಕಟ್ಟಡದ ವಾಹನ ಪಾರ್ಕಿಂಗ್ ಆವರಣದಲ್ಲಿ   ಹಲವಾರು ಶವಗಳನ್ನು ಸಾಲಾಗಿ ಇರಿಸಿರುವುದನ್ನು ತಾನು ಕಂಡಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆಯ ವರದಿಗಾರರೊಬ್ಬರು ತಿಳಿಸಿದ್ದಾರೆ.

ಪ್ರತಿ ತಿಂಗಳು ದಕ್ಷಿಣ ಅಮೆರಿಕದ ವಿವಿಧ ರಾಷ್ಟ್ರಗಳಿಂದ ಸುಮಾರು 2 ಲಕ್ಷಮಂದಿ ಮೆಕ್ಸಿಕೊ ದೇಶದ ಗಡಿಯನ್ನು ದಾಟಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಮದ್ಯ ಹಾಗೂ ದಕ್ಷಿಣ ಅಮೆರಿಕದ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ.ತಮ್ಮ ದೇಶಗಳಲ್ಲಿ ವ್ಯಾಪಕವಾಗಿರುವ ಬಡತನ ಹಾಗೂ ಹಿಂಸಾಚಾರದಿಂದ ಪಾರಾಗಲು ತಾವು ಅಮೆರಿಕದಲ್ಲಿ  ಅಶ್ರಯ ಪಡೆಯಲು ಇಚ್ಛಿಸುವುದಕ್ಕೆ ಕಾರಣವೆಂದು ಅವರು ಹೇಳಿಕೊಳ್ಳುತ್ತಾರೆ

2014ನೇ ಇಸವಿಯಿಂದೀಚೆಗೆ ಮೆಕ್ಸಿಕೊ ಗಡಿಮಾರ್ಗವಾಗಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಯತ್ನದಲ್ಲಿ  ಸುಮಾರು 7661 ಮಂದಿ ವಲಸಿಗರು ಪ್ರಾಣಕಳೆದುಕೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.  ಇವರಲ್ಲಿ 988 ಮಂದಿ  ಅವಘಡಗಳಲ್ಲಿ ಅಥವಾ  ಶೋಚನೀಯವಾದ ಪರಿಸ್ಥಿತಿಗಳಿಂದಾಗಿ ಸಾವನ್ನಪ್ಪಿದ್ದಾರೆಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಓಎಂ)ಯ ವರದಿ ತಿಳಿಸಿದೆ.

Similar News