ಲೋಕಸಭಾಧ್ಯಕ್ಷ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ಮಂಡಿಸಲು ಮುಂದಾದ ಕಾಂಗ್ರೆಸ್: ಕೆಲ ವಿಪಕ್ಷಗಳ ಹಿಂದೇಟು

Update: 2023-03-29 08:45 GMT

ಹೊಸ ದಿಲ್ಲಿ: ಕಾಂಗ್ರೆಸ್ ಪಕ್ಷವು ಲೋಕಸಭಾಧ್ಯಕ್ಷ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಲು ಮುಂದಾಗಿದ್ದು, ಕೆಲ ವಿಪಕ್ಷಗಳು ಈ ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಅದರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು indianexpress.com ವರದಿ ಮಾಡಿದೆ.

ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಈ ನಡೆಯನ್ನು ಪ್ರತಿಪಾದಿಸಿದ್ದು, ನೋಟಿಸ್‌ನ ಕರಡು ಪ್ರತಿಯನ್ನೂ ಸಿದ್ಧಪಡಿಸಿದ್ದಾರೆ. ಆದರೆ, ವಿಪಕ್ಷಗಳ ನಡುವೆ ಭಿನ್ನಮತ ಮೂಡಿ, ವಿಪಕ್ಷಗಳಲ್ಲಿ ಒಡಕು ಮೂಡಿಸುವ ಏನನ್ನೂ ಮಾಡದಿರಲು ಕಾಂಗ್ರೆಸ್ ನಿರ್ಧರಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತರಾತುರಿಯಲ್ಲಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಮಂಗಳವಾರ ಪ್ರತಿಭಟನೆ ನಡೆಸಿತು. ಇದರ ಬೆನ್ನಿಗೇ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮನೀಶ್ ತಿವಾರಿ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಲು ಮುಂದಾಗಬೇಕು ಎಂದು ಪಕ್ಷದ ನಾಯಕತ್ವಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ನಾಯಕತ್ವವು ಅವಿಶ್ವಾಸ ನೋಟಿಸ್ ಕರಡು ಸಿದ್ಧಪಡಿಸುವಂತೆ ಮನೀಶ್ ತಿವಾರಿ ಅವರಿಗೆ ಸೂಚಿಸಿತ್ತು ಮತ್ತು ಮಂಗಳವಾರ ಅವರು ಕರಡನ್ನು ಪಕ್ಷದ ನಾಯಕರಿಗೆ ಹಸ್ತಾಂತರಿಸಿದ್ದರು. ಆದರೆ, ಈ ಸಂಬಂಧ ಮುಂದುವರಿಯುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತರ ವಿಪಕ್ಷಗಳು ಈ ನಡೆಗೆ ಸಹಮತ ವ್ಯಕ್ತಪಡಿಸಬಹುದು ಎಂಬ ಬಗ್ಗೆ ಕಾಂಗ್ರೆಸ್ ನಾಯಕತ್ವಕ್ಕೆ ಇನ್ನೂ ಖಾತ್ರಿಯಿಲ್ಲ. ಇಂತಹ ನಡೆಗೆ ಕೆಲವು ವಿರೋಧ ಪಕ್ಷಗಳು ಹಿಂದೇಟು ಹಾಕಿವೆ ಎಂದು ಹೇಳಲಾಗಿದೆ. ವಿಪಕ್ಷಗಳ ಗುಂಪಿನಲ್ಲಿ ಭಿನ್ನಮತ ಇರುವುದನ್ನು ತೋರಿಸುವ ಯಾವುದೇ ಕ್ರಮ ಕಾಂಗ್ರೆಸ್ ನಾಯಕತ್ವಕ್ಕೆ ಬೇಕಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲೋಕಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಗಳ ನಿಯಮಾನುಸಾರ, ಲೋಕಸಭಾಧ್ಯಕ್ಷ ಅಥವಾ ಉಪಾಧ್ಯಕ್ಷರನ್ನು ತೆರವುಗೊಳಿಸಲು ಅವಿಶ್ವಾಸ ನಿರ್ಣಯ ನೋಟಿಸ್ ನೀಡುವ ಯಾವುದೇ ಸದಸ್ಯ ಅದನ್ನು ಪ್ರಧಾನ ಕಾರ್ಯದರ್ಶಿಗೆ ಲಿಖಿತವಾಗಿ ನೀಡಬೇಕಾಗುತ್ತದೆ. ಸದರಿ ಸದಸ್ಯನ ಹೆಸರಲ್ಲಿ ಆ ನಿರ್ಣಯವನ್ನು ಮುಂದುವರಿಸುವ ಅಥವಾ ಹಿಂಪಡೆಯುವ ಕ್ರಮವನ್ನು ಲೋಕಸಭಾ ವ್ಯವಹಾರ ಪಟ್ಟಿಯಲ್ಲಿ ನಮೂದಿಸಲಾಗುತ್ತದೆ.ಅದಕ್ಕಾಗಿ ಲೋಕಸಭಾಧ್ಯಕ್ಷರು ನಿಗದಿಪಡಿಸುವ ದಿನಾಂಕವು, ಅವಿಶ್ವಾಸ ನಿರ್ಣಯ ನೋಟಿಸ್ ಸ್ವೀಕರಿಸಿದ ದಿನದಿಂದ 14 ದಿನದ ನಂತರ ಮಾತ್ರ ಆಗಿರಬೇಕಾಗುತ್ತದೆ.

Similar News