ಮೋದಿಯವರನ್ನು ಸಿಲುಕಿಸಲು ಯುಪಿಎ ಅಧಿಕಾರಾವಧಿಯಲ್ಲಿ ಸಿಬಿಐ ಒತ್ತಡ: ಅಮಿತ್ ಶಾ ಆರೋಪ

Update: 2023-03-30 05:12 GMT

ಹೊಸದಿಲ್ಲಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತನ್ನನ್ನು ಜೈಲಿಗೆ ಅಟ್ಟಲು ಎಲ್ಲ ತಂತ್ರಗಳೂ ನಡೆದಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ, "ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಮೋದಿಯವರನ್ನು ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು" ಎಂದು ಗೃಹಸಚಿವ ಅಮಿತ್ ಶಾ ಆಪಾದಿಸಿದ್ದಾರೆ.

"ನಾನು ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದೆ. ಮೋದಿಯ ಹೆಸರನ್ನು ಪ್ರಕರಣದಲ್ಲಿ ಎಳೆದು ತಂದರೆ ನಿಮ್ಮನ್ನು ಬಿಡುಗಡೆ ಮಾಡುವುದಾಗಿ ಪದೇ ಪದೇ ಹೇಳಲಾಗುತ್ತಿತ್ತು. ಅವರು ಕೇಳುತ್ತಿದ್ದ ಶೇಕಡ 90ಕ್ಕಿಂತಲೂ ಹೆಚ್ಚು ಪ್ರಶ್ನೆಗಳಲ್ಲಿ ಅವರು, ಮೋದಿಯವರ ಹೆಸರು ಹೇಳುವಂತೆ ಕೇಳುತ್ತಿದ್ದರು ಹಾಗೂ ಹೆಸರು ಹೇಳಿದಲ್ಲಿ ನಿಮ್ಮನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ ನಾನು ಅದಕ್ಕೆ ನಿರಾಕರಿಸಿದ್ದರಿಂದ ಜೈಲಿಗೆ ತಳ್ಳಲಾಯಿತು" ಎಂದು ನ್ಯೂಸ್18 ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಶಾ ಹೇಳಿದರು.

ಇಷ್ಟಾಗಿಯೂ ಬಿಜೆಪಿ ಇದರ ವಿರುದ್ಧ ಬೊಬ್ಬೆ ಹೊಡೆಯಲಿಲ್ಲ ಅಥವಾ ಕಪ್ಪು ಕುರ್ತಾ, ಧೋತಿ ಮತ್ತು ಪಗ್ಡಿಯೊಂದಿಗೆ ಪ್ರತಿಭಟನೆ ನಡೆಸಲಿಲ್ಲ ಎಂದು ವ್ಯಂಗ್ಯವಾಡಿದರು. "ಆಗ ಸೋನಿಯಾಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು ಮತ್ತು ಮನಮೋಹನಸಿಂಗ್ ಪ್ರಧಾನಿಯಾಗಿದ್ದರು. ಹಲವು ಮಂದಿ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸಲಾಯಿತು" ಎಂದು ಹೇಳಿದರು. "ಮುಂಬೈ ನ್ಯಾಯಾಲಯ ನನ್ನನ್ನು ಆರೋಪಮುಕ್ತಗೊಸಿ, ನನ್ನನ್ನು ರಾಜಕೀಯ ಕಾರಣಗಳಿಗೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಆದರೂ ನಾವು ಪ್ರತಿಭಟನೆ ಮಾಡಲಿಲ್ಲ" ಎಂದು ಹೇಳಿಕೊಂಡರು.

Similar News