ಪಾಕಿಸ್ತಾನದ 2 ಶತಕೋಟಿ ಡಾಲರ್ ಸಾಲ ನವೀಕರಿಸಿದ ಚೀನಾ

Update: 2023-03-31 17:32 GMT

ಇಸ್ಲಮಾಬಾದ್, ಮಾ.31: ಕಳೆದ ವಾರ ಪಾವತಿಸಬೇಕಿದ್ದ 2 ಶತಕೋಟಿ ಡಾಲರ್ ಸಾಲವನ್ನು ಚೀನಾ ನವೀಕರಿಸಿದ್ದು ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಲಾಗಿದೆ ಎಂದು ಪಾಕಿಸ್ತಾನದ ವಿತ್ತಸಚಿವ ಇಷಾಕ್ ದರ್ ಶುಕ್ರವಾರ ಮಾಹಿತಿ ನೀಡಿದ್ದಾರೆ.

‌ಇದರೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ತುಸು ನಿರಾಳವಾಗಿದೆ. ಪಾಕಿಸ್ತಾನದ ವಿದೇಶಿ ವಿನಿಮಯ ದಾಸ್ತಾನು ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದ್ದು 4 ವಾರಕ್ಕೆ ಸಾಲುವಷ್ಟು ಅಗತ್ಯ ವಸ್ತುಗಳ ಆಮದು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ ನಿಂದ 1.1 ಶತಕೋಟಿ ಡಾಲರ್ ಸಾಲ ಕ್ಷಿಪ್ರವಾಗಿ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಇಷಾಕ್ ದರ್ ಹೇಳಿದ್ದಾರೆ.

ಚೀನಾದ ಸಾಲ ನವೀಕರಣಗೊಂಡಿರುವುದನ್ನು ಪಾಕ್ ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳೂ ದೃಢಪಡಿಸಿದ್ದಾರೆ. ಆದರೆ ಎಷ್ಟು ವರ್ಷದ ವಾಯಿದೆಗೆ ನವೀಕರಣಗೊಂಡಿದೆ ಎಂಬ ವಿವರ ನೀಡಿಲ್ಲ. ಪಾಕಿಸ್ತಾನಕ್ಕೆ 1.1 ಶತಕೋಟಿ ಡಾಲರ್ ಸಾಲ ಖಾತರಿ ಪಡಿಸಲು ವಿಶ್ವಬ್ಯಾಂಕ್ ಕೆಲವೊಂದು ಷರತ್ತುಗಳನ್ನು ಮುಂದಿರಿಸಿದೆ.  ಪಾಕಿಸ್ತಾನದ ಬಾಕಿ ಪಾವತಿಗೆ ನಿಧಿ ಒದಗಿಸುವ ಬಗ್ಗೆ ಬಾಹ್ಯ ಹಣಕಾಸಿನ ಭರವಸೆ ಒದಗಿಸುವ ಷರತ್ತು ಇದರಲ್ಲಿ ಪ್ರಮುಖವಾಗಿದೆ. 

Similar News