ಚುನಾವಣೆ ಸುಧಾರಣೆ 2.0ಗೆ ಇದು ಸಕಾಲ

Update: 2023-04-01 04:39 GMT

ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿರುವಾಗಲೇ ಯಾವುದೂ ಸರಿ ಇಲ್ಲ ಎಂದು ತಕ್ಷಣಕ್ಕೆ ಗೊತ್ತಾಗಿಬಿಡುವ ಒಂದು ಸಂಗತಿ ಎಂದರೆ, ಚುನಾವಣೆಗಳ ಕಾಲದಲ್ಲಿ ವೆಚ್ಚ ಮಿತಿಗಳ ನಿಗಾ-ನಿರ್ವಹಣೆ. 2022ರ ಜನವರಿ ಆರರಿಂದ ಅನ್ವಯ ಆಗುವಂತೆ, ಚುನಾವಣಾ ಆಯೋಗವು ವಿಧಾನಸಭಾ ಅಭ್ಯರ್ಥಿಗಳಿಗೆ ಚುನಾವಣಾ ಕಾಲದ ವೆಚ್ಚಕ್ಕೆ ತಲಾ 40 ಲಕ್ಷ ರೂ.ಗಳ ಮಿತಿಯನ್ನು ವಿಧಿಸಿದೆ.ಅದಕ್ಕಿಂತ ಮೊದಲು, ಈ ವೆಚ್ಚ ಮಿತಿ ಕೇವಲ 28 ಲಕ್ಷ ರೂ. ಇತ್ತು. ನಾಡಿನ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಿಳಿದಿರುವ ಯಾರೂ ಕೂಡ, ಈ ವೆಚ್ಚಮಿತಿ ಅತ್ಯಂತ ಅವಾಸ್ತವಿಕ ಎಂದು ಚೆನ್ನಾಗಿ ಅರಿತಿರುತ್ತಾರೆ. ಚುನಾವಣಾ ಆಯೋಗವೂ ಕೂಡ ಈ ವೆಚ್ಚಮಿತಿ ಎಂಬುದು ‘‘ಕಾಗೆ ಲೆಕ್ಕ’’ ಎಂದು ಗೊತ್ತಿದ್ದರೂ, ಅದನ್ನು ಹಾಗೆಯೇ ಒಪ್ಪಿಕೊಂಡುಬಿಡುವುದು ಅನೂಚಾನವಾಗಿ ನಡೆದುಕೊಂಡುಬಂದಿದೆ.

ಕರ್ನಾಟಕದಲ್ಲಿ ಚುನಾವಣಾ ವೆಚ್ಚಗಳು ಅಸಹಜವಾಗಿ ಏರತೊಡಗಿದ್ದು, 1994-1999ರ ಚುನಾವಣೆಗಳಿಂದೀಚೆಗೆ. ತತ್ವಸಿದ್ಧಾಂತಗಳ ರಾಜಕೀಯದ ಭ್ರಮನಿರಸನವು ಗೆಲ್ಲಬಲ್ಲ ಅಭ್ಯರ್ಥಿಗಳ ಆಯ್ಕೆಗೆ ಹಾದಿ ಮಾಡಿಕೊಟ್ಟ ಅವಧಿ ಅದು. ವಿಪರ್ಯಾಸ ಎಂದರೆ, ಭಾರತದಲ್ಲಿ ಚುನಾವಣಾ ಸುಧಾರಣೆ ಪ್ರಕ್ರಿಯೆಗಳ ಹರಿಕಾರ ಟಿ.ಎನ್. ಶೇಷನ್ (1990-1996) ಅವರ ಅಧಿಕಾರಾವಧಿಯ ಬಳಿಕವೇ ಚುನಾವಣಾ ವೆಚ್ಚಗಳು ಏರುಗತಿ ಕಾಣತೊಡಗಿದ್ದು. ಅಲ್ಲಿಯ ತನಕ ಬಿಗಿ ಸ್ಪರ್ಧೆ ಇರುವ ಒಂದು ಗ್ರಾಮೀಣ ಕ್ಷೇತ್ರದಲ್ಲಿ, ಅಬ್ಬಬ್ಬಾ ಎಂದರೆ 40-50 ಲಕ್ಷ ರೂ.ಗಳು ಒಬ್ಬ ಅಭ್ಯರ್ಥಿಯ ಕೈಯಿಂದ ಖರ್ಚಾಗುತ್ತಿದ್ದವು. ಮಹಾನಗರಗಳಲ್ಲಿ ಇದು ತೀರಾ ಎಂದರೆ ಒಂದೆರಡು ಕೋಟಿ ರೂ. ಗಾತ್ರಕ್ಕೆ ಏರಿರುತ್ತಿತ್ತು. ಆದರೆ ಇಂದು ತೀರಾ ಸಾಮಾನ್ಯ ಕ್ಷೇತ್ರದಲ್ಲೂ ಕೂಡ ಪ್ರತಿಯೊಬ್ಬ ಪ್ರಮುಖ ಅಭ್ಯರ್ಥಿ 6ರಿಂದ 10 ಕೋಟಿ ರೂ.ಗಳನ್ನು ಮತ್ತು ಗರಿಷ್ಠ 20-30 ಕೋಟಿ ರೂ. ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದು ಕೇಳಿಬರುತ್ತಿದೆ. ಅದು ಹೌದೆಂಬುದಕ್ಕೆ ಪೂರಕವಾಗಿ ಸಾಕ್ಷ್ಯಗಳೂ ಸಿಗುತ್ತಿವೆ.

ಚುನಾವಣೆಗಳೆಂದರೆ, ರಾಜಕೀಯ ಪಕ್ಷಗಳು ದುಡ್ಡಿನ ಚೀಲಗಳನ್ನು ಕಣಕ್ಕಿಳಿಸಿ ಸೀಟು ಗೆಲ್ಲುವ ಆಟ ಎಂಬುದು ಸಾಬೀತಾಗತೊಡಗಿದ ಮೇಲೆ, ರಾಜಕೀಯ-ಸಿದ್ಧಾಂತ-ನೈತಿಕತೆ-ಸಾಮಾಜಿಕ ಕಾಳಜಿಗಳೆಲ್ಲ ಅರ್ಥ ಕಳೆದುಕೊಂಡಿದ್ದು, ದುಡ್ಡಿನ ಆಟಕ್ಕೆ ಒಂದು ಸಾಮಾಜಿಕ ಸ್ವೀಕಾರಾರ್ಹತೆಯೂ ಪ್ರಾಪ್ತವಾಗಿಬಿಟ್ಟಿದೆ. ಹಿಂದೆಲ್ಲ ಆಯ್ದ ಮನೆಗಳಿಗೆ ರಾತ್ರೋರಾತ್ರಿ ಗುಟ್ಟಾಗಿ ಹೋಗಿ ಹಣ, ಹೆಂಡ, ಉಡುಗೊರೆ ಹಂಚುತ್ತಿದ್ದವರು ಈಗ ಹಾಡಹಗಲೇ ಬಾಡೂಟ, ಸಾರ್ವಜನಿಕ-ಖಾಸಗಿ ಕಾರ್ಯಕ್ರಮಗಳ ಹೆಸರಿನಲ್ಲಿ ಬಹಿರಂಗವಾಗಿಯೇ ಸಭೆ ಕರೆದು ಗಿಫ್ಟ್ ಗಳನ್ನು ಹಂಚುತ್ತಿದ್ದಾರೆ, ಸಭೆ ಸಮಾರಂಭಗಳಿಗೆ ಕೂಲಿ ಕೊಟ್ಟು ಸಭಿಕರನ್ನು ಕರೆಸಿಕೊಳ್ಳುತ್ತಿದ್ದಾರೆ; ಚುನಾವಣಾ ಪ್ರಚಾರಕ್ಕೆ ದಿನಗೂಲಿಯಲ್ಲಿ ನೌಕರರನ್ನು ನೇಮಿಸಿಕೊಂಡಿದ್ದಾರೆ. ಇಲ್ಲಿ ‘‘ಅಯ್ಯೋ ಹೌದಾ.. ಗೊತ್ತೇ ಇರಲಿಲ್ಲ’’ ಎಂಬ ಅಮಾಯಕತೆ ಪ್ರದರ್ಶಿಸುವುದಕ್ಕೆ ಏನೂ ಉಳಿದಿಲ್ಲ. ಎಲ್ಲವೂ ಖುಲ್ಲಂಖುಲ್ಲಾ ನಡೆಯುತ್ತಿದೆ.

ರಾಜ್ಯದ 224 ಕ್ಷೇತ್ರಗಳಿಗೆ ತಲಾ 2-3 ಅಭ್ಯರ್ಥಿಗಳು ಎಂದಿಟ್ಟುಕೊಂಡರೂ, ಒಂದು ಸರಳ ಲೆಕ್ಕಾಚಾರ ತೆಗೆದರೆ, ವಿಧಾನಸಭಾ ಕ್ಷೇತ್ರವೊಂದರ 20ಕೋಟಿ ರೂ.ಗಳಂತೆ, ಒಟ್ಟು ರಾಜ್ಯದಲ್ಲಿ ಸರಿಸುಮಾರು 5,000 ಕೋಟಿ ರೂ.ಗಳ ಲೇವಾದೇವಿ ಅಭ್ಯರ್ಥಿಗಳ ಕಡೆಯಿಂದ ನಡೆದಿರುತ್ತದೆ. ಇದರ ಮೇಲೆ ಸ್ವತಃ ಚುನಾವಣಾ ಆಯೋಗ ಅಂದಾಜು 400 ಕೋಟಿ ರೂ.ಗಳನ್ನು ಸುಗಮ ಮತದಾನದ ವ್ಯವಸ್ಥೆಗಾಗಿ ವೆಚ್ಚ ಮಾಡಿರುತ್ತದೆ. ಅಭ್ಯರ್ಥಿಗಳಲ್ಲದೆ ರಾಜಕೀಯ ಪಕ್ಷಗಳದೂ ಬೇರೆ ಖರ್ಚಿದೆ. ದೊಡ್ಡ ನಾಯಕರ ತಿರುಗಾಟ, ಸಭೆ, ತಯಾರಿ... ಇತ್ಯಾದಿಗಳದು. ಒಂದು ಸಣ್ಣ ಕಣ್ಣಳತೆ ಬೇಕೆಂದಾದರೆ, 2018ರ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ, ಆ ವರ್ಷ ಮಾರ್ಚ್ 27ರಿಂದ ಮೇ 18ರ ನಡುವೆ ಪ್ರಮುಖ ಎರಡು ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ಮಾಡಿರುವ ವೆಚ್ಚಗಳು ಹೀಗಿವೆ: 22-12-2018ರಂದು ತನ್ನ ವೆಚ್ಚಪತ್ರ ಸಲ್ಲಿಸಿರುವ ಬಿಜೆಪಿ, ತಾನು 122.69 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿದ್ದರೆ, 2-11-2018ರಂದು ತನ್ನ ವೆಚ್ಚಪತ್ರ ಸಲ್ಲಿಸಿರುವ ಕಾಂಗ್ರೆಸ್ ತನ್ನ ಖರ್ಚು 34.48 ಕೋಟಿ ರೂ. ಎಂದು ಹೇಳಿದೆ. ಇದರ ಜೊತೆ ಅಭ್ಯರ್ಥಿಗಳ ವೈಯಕ್ತಿಕ ಖರ್ಚುಗಳು ಒಟ್ಟು ಸೇರಿ, ಸರಿಸುಮಾರು 5,500-6,000ಕೋಟಿ ರೂ.ಗಳು ಕರ್ನಾಟಕದ 2018ರ ಚುನಾವಣೆಗೆ ವೆಚ್ಚ ಆಗಿರಬಹುದೆಂದು ಹೇಳಿದರೆ, ಅದು ತೀರಾ ‘‘ಮಾಡೆಸ್ಟ್’’ ಲೆಕ್ಕಾಚಾರ! ಹೂಡಿಕೆಗಳು ಇಷ್ಟೊಂದು ಅಗಾಧ ಪ್ರಮಾಣದಾಗಿರುವುದರಿಂದಲೇ, ಚುನಾವಣೆಗಳು ಮುಗಿದ ಬಳಿಕವೂ ರೆಸಾರ್ಟ್ ಖರ್ಚು, ಕುದುರೆ ವ್ಯಾಪಾರಗಳಂತಹ ಮೇಲುಖರ್ಚುಗಳೂ ಬಂದು ಸೇರಿಕೊಳ್ಳುತ್ತಿವೆ!!

ಯಾವುದೇ ಒಂದು ನಿಗಾ ವ್ಯವಸ್ಥೆ ತಾನು ನಿಗಾ ಇರಿಸಿಕೊಳ್ಳಬೇಕಾದದ್ದರ ಶೇ. 75 ಭಾಗವನ್ನಾದರೂ ಪರಿಣಾಮಕಾರಿಯಾಗಿ ನಿಭಾಯಿಸುವುದು ಸಾಧ್ಯವಾದರೆ, ಅದನ್ನು ಪರಿಣಾಮಕಾರಿ ವ್ಯವಸ್ಥೆ ಅನ್ನಬಹುದು. ಅದಕ್ಕೆ ಬದಲಾಗಿ, ನಿಗಾ ಇರಿಸಿಕೊಳ್ಳಬೇಕಾದದ್ದರ ಶೇ. 10ನ್ನೂ ನಿಭಾಯಿಸಲಾಗದಿದ್ದರೆ, ಅದು ಕೇವಲ ಅವ್ಯವಸ್ಥೆ. ಸರಕಾರಿ ಲೆಕ್ಕಾಚಾರದಲ್ಲಿ 200-300 ಕೋಟಿ ರೂ.ಗಳ ಒಳಗೆ ನಡೆದು ಮುಗಿಯಬೇಕಾದ ಮಹತ್ವದ ಸಾಂವಿಧಾನಿಕ ಪ್ರಕ್ರಿಯೆಯೊಂದು 6,000 ಕೋಟಿ ರೂ. ಅಥವಾ ಅದಕ್ಕೂ ಮಿಕ್ಕಿ ವೆಚ್ಚದಲ್ಲಿ ನಡೆಯುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅಂತಹ ಚುನಾವಣೆಯೊಂದು ನ್ಯಾಯಸಮ್ಮತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ಎದೆ ಮುಟ್ಟಿ ಹೇಳಿಕೊಳ್ಳುವುದು ಸಾಧ್ಯವಿದೆಯೆ?

ಇಂದು ಅತ್ಯಾಧುನಿಕ ವಿಚಕ್ಷಣಾ ಟೂಲ್‌ಗಳು ಸರಕಾರಿ ವ್ಯವಸ್ಥೆಯೊಳಗೇ ಲಭ್ಯ ಇರುವಾಗ, ದೇಶದ ನೈತಿಕ, ಸಾಮಾಜಿಕ, ಆರ್ಥಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಚುನಾವಣಾ ವೆಚ್ಚಗಳಿಗೆ ಕಡಿವಾಣ ಹಾಕುವುದು ಕಷ್ಟವಲ್ಲ. ಅಂತಹ ಇಚ್ಛಾಶಕ್ತಿ ಇರುವವರೊಬ್ಬರು ಆ ಜಾಗಕ್ಕೆ ಬರುವುದು ಅಗತ್ಯವಿದೆ, ಅಷ್ಟೇ. ಟಿ.ಎನ್. ಶೇಷನ್ ಅವರು ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ತನಕ ಅಂದೊಂದು ಮಹತ್ವದ ಸಾಂವಿಧಾನಿಕ ಹುದ್ದೆ ಎಂಬ ಕಲ್ಪನೆಯೂ ದೇಶಕ್ಕೆ ಇರಲಿಲ್ಲ. ಇತಿಮಿತಿಗಳಿಲ್ಲದ ಚುನಾವಣಾ ಪ್ರಚಾರಕ್ಕೆ ಅವರು ‘ನೀತಿ ಸಂಹಿತೆಯ’ ಕಡಿವಾಣ ತೊಡಿಸಿದರು. ಈಗ 25 ವರ್ಷಗಳ ಬಳಿಕ ಪರಿಸ್ಥಿತಿ ಮತ್ತೆ ಬದಲಾಗಿದೆ. ರಾಜಕೀಯಸ್ಥರು ಚಾಪೆ, ರಂಗೋಲಿಗಳಡಿ ತೂರಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹಾಗಾಗಿ ಚುನಾವಣೆ ಸುಧಾರಣೆಗಳ ಹೊಸ ಆವೃತ್ತಿ ಜಾರಿಗೆ ಬರಲು ಇದು ಸಕಾಲ.

Similar News