ನ್ಯಾಯಾಲಯದಿಂದ ದಂಡಕ್ಕೆ ಗುರಿಯಾದರೂ ಪ್ರಧಾನಿಯ ಪದವಿ ಕುರಿತು ಮತ್ತೆ ಪ್ರಶ್ನಿಸಿದ ಅರವಿಂದ್ ಕೇಜ್ರಿವಾಲ್

Update: 2023-04-01 10:54 GMT

ಹೊಸದಿಲ್ಲಿ: ಗುಜರಾತ್ ಹೈಕೋರ್ಟ್ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿವರ ನೀಡುವ ಅಗತ್ಯವಿಲ್ಲವೆಂದು ಅಭಿಪ್ರಾಯ ಪಟ್ಟು, ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿದ ಮರು ದಿನ ಕೂಡಾ ದಿಲ್ಲಿಯ ಮುಖ್ಯಮಂತ್ರಿಯಾದ ಅವರು ಪ್ರಧಾನಿ ನರೇಂದ್ರ ಮೋದಿಯವರ ಪದವಿ ಕುರಿತ ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್, "ಗುಜರಾತ್ ನ್ಯಾಯಾಲಯದ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಕುರಿತು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹಲವಾರು ನಿರ್ಣಯಗಳನ್ನು ಕೈಗೊಳ್ಳಬೇಕಿರುವುದರಿಂದ ಪ್ರಧಾನಿಯಾದವರು ವಿದ್ಯಾವಂತರಾಗಿರಬೇಕಾಗುತ್ತದೆ" ಎಂದು ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆ ಕುರಿತು ಮಾಹಿತಿ ನೀಡಬೇಕು ಎಂದು ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಆದೇಶವನ್ನು ಶುಕ್ರವಾರ ಗುಜರಾತ್ ಹೈಕೋರ್ಟ್ ರದ್ದುಗೊಳಿಸಿತ್ತು. ಅಲ್ಲದೆ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶ ಬೀರೇನ್ ವೈಷ್ಣವ್ ಅವರು ಈಗಾಗಲೇ ಸಾರ್ವಜನಿಕ ಬದುಕಿನಲ್ಲಿರುವವರ ಕುರಿತು ಈ ವಿವರಗಳನ್ನು ಕೋರಿದ್ದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ರೂ. 25,000 ದಂಡ ವಿಧಿಸಿದ್ದರು. ಈ ದಂಡವನ್ನು ನಾಲ್ಕು ವಾರಗಳೊಳಗೆ ಪಾವತಿಸಬೇಕು ಎಂದೂ ನ್ಯಾಯಾಲಯ ಅವರಿಗೆ ಸೂಚಿಸಿದೆ.

2016ರಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಾದ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಯ ವಿದ್ಯಾರ್ಹತೆ ಕುರಿತು ಮಾಹಿತಿ ಕೋರಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಮಾಹಿತಿ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಅಂದಿನ ಕೇಂದ್ರ ಮಾಹಿತಿ ಆಯುಕ್ತ ಎಂ.ಶ್ರೀಧರ್ ಆಚಾರ್ಯುಲು ಸೂಚಿಸಿದ್ದರು. ಈ ಸೂಚನೆಯನ್ವಯ ಗುಜರಾತ್ ವಿಶ್ವವಿದ್ಯಾಲಯ ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆಯ ವಿವರವನ್ನು ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿತ್ತಾದರೂ, ಅದೇ ವೇಳೆ ಮೂಲತತ್ವವನ್ನು ಮುಂದು ಮಾಡಿ, ಕೇಂದ್ರ ಮಾಹಿತಿ ಆಯುಕ್ತರ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್, "ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆ ವಿವರ ಸಾರ್ವಜನಿಕವಾಗಿ ಲಭ್ಯವಿರುವಾಗ, ಅರವಿಂದ್ ಕೇಜ್ರಿವಾಲ್ ಅವರು ಮಾಹಿತಿ ಹಕ್ಕು ಅರ್ಜಿಯ ಮೂಲಕ ಆ ಮಾಹಿತಿಯನ್ನು ಪಡೆಯಲು ಮುಂದಾಗಿರುವುದು ಅವರ ವಿಶ್ವಾಸಾರ್ಹತೆ ಹಾಗೂ ಉದ್ದೇಶದ ಕುರಿತು ಅನುಮಾನ ಮೂಡಿಸುತ್ತದೆ" ಎಂದು ಶುಕ್ರವಾರ ಅಭಿಪ್ರಾಯಪಟ್ಟು, ಕೇಂದ್ರ ಮಾಹಿತಿ ಆಯುಕ್ತರ ಆದೇಶವನ್ನು ವಜಾಗೊಳಿಸಿತ್ತಲ್ಲದೆ, ಅರ್ಜಿದಾರ ಅರವಿಂದ್ ಕೇಜ್ರಿವಾಲ್ ಅವರಿಗೆ ರೂ. 25,000. ದಂಡವನ್ನೂ ವಿಧಿಸಿತ್ತು.

Similar News