ಐಐಟಿ ಮದ್ರಾಸ್‌ನ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ

Update: 2023-04-01 10:26 GMT

ಚೆನ್ನೈ: ಐಐಟಿ ಮದ್ರಾಸ್‌ನ (IIT-Madras) ಸಂಶೋಧನಾ ವಿದ್ಯಾರ್ಥಿಯೊಬ್ಬ ತನ್ನ ನಿವಾಸದಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾನೆ ಎಂದು The Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತ ವಿದ್ಯಾರ್ಥಿಯನ್ನು ಸಚಿನ್ ಕುಮಾರ್ ಜೈನ್ (23) ಎಂದು ಗುರುತಿಸಲಾಗಿದ್ದು, ಆತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌. ಆದರೆ, ಆತನ ಕೊನೆಯ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ "ಕ್ಷಮಿಸಿ, ಸಾಕಷ್ಟು ಉತ್ತಮವಾಗಿಲ್ಲ" ಎಂದು ಹೇಳಿದ್ದಾನೆ.

ತರಗತಿಗೆ ಹಾಜರಾಗಲು ತೆರಳಿದ್ದ ಜೈನ್ ಮಾರ್ಗಮಧ್ಯೆಯೇ ಮನೆಗೆ ಮರಳಿದ್ದ. ಇದಾದ ನಂತರ ಆತ ತನ್ನ ಕೊನೆಯ ವಾಟ್ಸ್ ಆ್ಯಪ್ ಸ್ಟೇಟಸ್‌ ಹಾಕಿದ್ದಾನೆ. ಈ ಸ್ಟೇಟಸ್ ನೋಡಿದ ಆತನ ಕೆಲವು ಸ್ನೇಹಿತರು ಕೂಡಲೇ ಆತನನ್ನು ಹುಡುಕಲು ಆತನ ತರಗತಿಗೆ ದೌಡಾಯಿಸಿದ್ದಾರೆ ಎಂದು The Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವರ್ಷ ಐಐಟಿ ಮದ್ರಾಸ್‌ನಲ್ಲಿ ಇದು ಮೂರನೆಯ ಶಂಕಿತ ಆತ್ಮಹತ್ಯೆ ಪ್ರಕರಣವಾಗಿದ್ದು, 2018ರಿಂದ 11ನೆಯ ಪ್ರಕರಣವಾಗಿದೆ ಎಂದು The Telegraph ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ಮಾರ್ಚ್ 14ರಂದು ಇದೇ ಶಿಕ್ಷಣ ಸಂಸ್ಥೆಯ ಮೂರನೆ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ.‌ ಇದಕ್ಕೂ ಮುನ್ನ ಫೆಬ್ರವರಿ 13ರಂದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಎರಡನೆ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ತನ್ನ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಕಳೆದ ಸೋಮವಾರ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಶ್ ಸರ್ಕಾರ್ ಅವರು 2018ರಿಂದ ದೇಶಾದ್ಯಂತ ಇರುವ ಐಐಟಿಗಳಲ್ಲಿ ಒಟ್ಟು 33 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಗೆ ಮಾಹಿತಿ ನೀಡಿದ್ದರು.

ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಒಂದಾದ ಐಐಟಿಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾನಸಿಕ ಆಪ್ತ ಸಮಾಲೋಚನಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರು ಹಾಗೂ ಮಾನಸಿಕ ತಜ್ಞರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ

Similar News