ಜೈಲಿನಿಂದ ಬಿಡುಗಡೆಗೊಂಡ ಬೆನ್ನಲ್ಲೇ ಕೇಂದ್ರ, ಪಂಜಾಬ್ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕನ ವಾಗ್ದಾಳಿ

ಪಂಜಾಬ್ ನಲ್ಲಿ ಪ್ರಜಾಪ್ರಭುತ್ವವೇ ಇಲ್ಲವಾಗಿದೆ: ಸಿಧು

Update: 2023-04-01 16:48 GMT

ಹೊಸದಿಲ್ಲಿ,ಎ.1: 1988ರ ರಸ್ತೆಯಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ ದೋಷಿಯಾಗಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಶನಿವಾರ ಪಾಟಿಯಾಲದ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಜೈಲಿನಿಂದ ಹೊರಬರುತ್ತಿದ್ದಂತೆಯೇ ಕೇಂದ್ರ ಹಾಗೂ ಪಂಜಾಬ್ ಸರಕಾರಗಳ ವಿರುದ್ಧ ಗುಡುಗಿರುವ ಅವರು‘‘ ಪಂಜಾಬ್ ನಲ್ಲಿ ಪ್ರಜಾಪ್ರಭುತ್ವವೇ ಇಲ್ಲವಾಗಿದೆ ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಸಂಚೊಂದನ್ನು ರೂಪಿಸಲಾಗುತ್ತಿದೆ’’ ಎಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವವು ಸಂಕೋಲೆಯಲ್ಲಿ ಬಂಧಿತವಾಗಿದೆ ಹಾಗೂ ಸಾಂವಿಧಾನಿಕ ಸಂಸ್ಥೆಗಳು ಗುಲಾಮರಾಗಿ ಬದಲಾಗಿವೆ ಎಂದವರು ಹೇಳಿದ್ದಾರೆ.

ಮುಖ್ಯಮಂತ್ರಿ ಭಗವಂತಸಿಂಗ್ ಮಾನ್ ಅವರು ಪಂಜಾಬ್ ಜನತೆಗೆ ಹುಸಿ ಭರವಸೆಗಳನ್ನು ನೀಡುತ್ತಿದ್ದಾರೆಂದು ಟೀಕಿಸಿದ ಸಿಧು, ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ರಾಹುಲ್ ಗಾಂಧಿಗೆ ತನ್ನ ದೃಢಬೆಂಬಲವನ್ನು ಘೋಷಿದರು. ‘‘ರಾಹುಲ್ ಗಾಂಧಿ ಸಂವಿಧಾನದ ಸಂರಕ್ಷಕ ಹಾಗೂ ಸಿಧು ಅವರ ಜೊತೆಗಿರುತ್ತಾನೆ’’ ಎಂದರು.

 ವಾರಿಸ್ ದೆ ಪಂಜಾಬ್ ಸಂಘಟನೆಯ ವರಿಷ್ಠ ಅಮೃತಪಾಲ್ ಸಿಂಗ್ನ ಬಂಧನಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆ ಬಳಿಕ ರಾಜ್ಯದಲ್ಲಿನ ಕಾನೂನು, ಸುವ್ಯವಸ್ಥೆ ಪರಿಸ್ಥಿತಿಯ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾನ ನಿವಾಸಕ್ಕೆ ಭೇಟಿ ನೀಡುವ ವೇಳೆ ಈ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.

1988ರಲ್ಲಿ ವಾಹನ ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಎಂಬವರ ಮೇಲೆ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಸಿಧುಗೆ ಸುಪ್ರೀಂಕೋರ್ಟ್ ಕಳೆದ ವರ್ಷದ 20ರಂದು 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಸನ್ನಡತೆಯ ಹಿನ್ನೆಲೆಯಲ್ಲಿ ಸಿಧು ಅವರನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೊಳಿಸಲಾಗಿದೆಯೆಂದು ಅವರ ವಕೀಲರು ತಿಳಿಸಿದ್ದಾರೆ.

ಸಿಧು ಅವರನ್ನು ಸ್ವಾಗತಿಸಲು ಅವರ ನೂರಾರು ಬೆಂಬಲಿಗರು ಪಾಟಿಯಾಲ ಜಿಲ್ಲಾ ಕಾರಾಗೃಹದ ಮುಂದೆ ಜಮಾಯಿಸಿದ್ದರು. ಅಮೃತಸರ ಕಾಂಗ್ರೆಸ್ ಸಂಸದ ಗುರುಜೀತ್ ಔಜ್ಲಾ ಹಾಗೂ ಮಾಜಿ ಶಾಸಕರಾದ ಅಶ್ವನಿ ಸೇಖ್ರಿ, ಸುಖವಿಂದರ್ ಡ್ಯಾನಿ ಹಾಗೂ ಸುನೀಲ್ ದತ್ತಿ ಕೂಡಾ ಉಪಸ್ಥಿತರಿದ್ದರು.

Similar News