​ದೇಶದಲ್ಲಿ ಶೇ.7.8 ಕ್ಕೇರಿದ ನಿರುದ್ಯೋಗ ಪ್ರಮಾಣ

ಮೂರು ತಿಂಗಳುಗಳಲ್ಲೇ ಗರಿಷ್ಠ ► ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇ.2.3

Update: 2023-04-01 17:48 GMT

ಮುಂಬೈ,ಎ.1: ಭಾರತದಲ್ಲಿ ನಿರುದ್ಯೋಗವು ಮಾರ್ಚ್ ತಿಂಗಳಲ್ಲಿ 7.8 ಶೇಕಡಕ್ಕೆ ತಲುಪಿದ್ದು, ಇದು ಮೂರು ತಿಂಗಳುಗಳಲ್ಲೇ ಅತ್ಯಧಿಕವಾಗಿದೆಯೆಂದು ಭಾರತೀಯ ಆರ್ಥಿಕತೆಗಾಗಿನ ಕಣ್ಗಾವಲು ಕೇಂದ್ರ (ಸಿಎಂಐಇ) ಶನಿವಾರ ತಿಳಿಸಿದೆ.

2022ರ ಡಿಸೆಂಬರ್ನಲ್ಲಿ ನಿರುದ್ಯೋಗ ಪ್ರಮಾಣವು ಶೇ.8.30ಕ್ಕೆ ತಲುಪಿತ್ತು, ಆದರೆ 2023ರ ಜನವರಿಯಲ್ಲಿ 7.14 ಶೇ.ಕ್ಕೆ ತಲುಪಿತ್ತು. ಫೆಬ್ರವರಿಯಲ್ಲಿ ಅದು ಮತ್ತೆ ಶೇ.7.45ಕ್ಕೇರಿತು ಎಂದು ಶನಿವಾರ ಬಿಡುಗಡೆಯಾದ ಸಿಎಂಐಇ ದತ್ತಾಂಶಗಳು ಬಹಿರಂಗಪಡಿಸಿವೆ.

 ಮಾರ್ಚ್ ನಲ್ಲಿ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ಶೇ.8.4 ಆಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಅದು ಶೇ.7.5 ಆಗಿದೆ.

‘‘ 2023ರಲ್ಲಿ ಭಾರತದ ಕಾರ್ಮಿಕ ಮಾರುಕಟ್ಟೆ ಹದಗೆಟ್ಟಿತ್ತು. ಫೆಬ್ರವರಿಯಲ್ಲಿ ಶೇ.7.5ರಷ್ಟಿದ್ದ ನಿರುದ್ಯೋಗ ಪ್ರಮಾಣವು ಮಾರ್ಚ್ನಲ್ಲಿ 7.8 ಶೇ.ಕ್ಕೇರಿತು. ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯ ಪ್ರಮಾಣವು 39.9ರಿಂದ 39.8ಕ್ಕೆ ಕುಸಿದಿರುವುದು ಇದಕ್ಕೆ ಪೂರಕವಾಯಿತು’’ ಎಂದು ಸಿಎಂಐಇನ ಆಡಳಿತ ನಿರ್ದೇಶಕ ಮಹೇಶ್ ವ್ಯಾಸ್ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ 36.9ರಷ್ಟಿದ್ದ ಉದ್ಯೋಗ ಪ್ರಮಾಣವು ಮಾರ್ಚ್ ನಲ್ಲಿ 36.7ಕ್ಕೆ ಕುಸಿದಿದೆ ಹಾಗೂ ದೇಶದಲ್ಲಿನ ಉದ್ಯೋಗಗಳ ಸಂಖ್ಯೆಯು 40.99 ಕೋಟಿಯಿಂದ 47.60 ಕೋಟಿಗೆ ಕುಸಿದಿದೆ.

ಹರ್ಯಾಣದಲ್ಲಿ ನಿರುದ್ಯೋಗ ಪ್ರಮಾಣವು ಗರಿಷ್ಠವಾಗಿದ್ದು ಶೇ.26.8 ರಷ್ಟಿದೆ. ರಾಜಸ್ತಾನ (26.4 ಶೇ.) ಜಮ್ಮುಕಾಶ್ಮೀರ (23.1 ಶೇ.) ಸಿಕ್ಕಿಂ (20.7 ಶೇ.), ಬಿಹಾರ (17.6 ಶೇ.) ಹಾಗೂ ಜಾರ್ಖಂಡ್ (17.5 ಶೇ.) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.

ನಿರುದ್ಯೋಗ ಪ್ರಮಾಣವ ಉತ್ತರಾಖಂಡ ಹಾಗೂ ಚತ್ತೀಸ್ಗಡ್ ದಲ್ಲಿ ಅತ್ಯಂತ ಕನಿಷ್ಠವಾಗಿದ್ದು, ತಲಾ ಶೇ.0.8ರಷ್ಟಿದೆ. ಪುದುಚೇರಿ (1.5 ಶೇ.), ಗುಜರಾತ್ (1.8 ಶೇ.), ಕರ್ನಾಟಕ (2.3 ಶೇ.) ಹಾಗೂ ಮೇಘಾಲಯ ಮತ್ತು ಒಡಿಶಾ ( ತಲಾ 2.6 ಶೇ.) ನಿರುದ್ಯೋಗ ಕಡಿಮೆ ಪ್ರಮಾಣದಲ್ಲಿರುವ ಇತರ ರಾಜ್ಯಗಳಾಗಿವೆ ಎಂದು ಸಿಐಎಂಐಇ ವರದಿ ತಿಳಿಸಿದೆ.

Similar News