ಮಲಾರ್ ಯಾದ್ ಫೌಂಡೇಶನ್‌ನಿಂದ ಸೌಹಾರ್ದ ಇಫ್ತಾರ್ ಕೂಟ
ಮಂಗಳೂರು: ಮನುಷ್ಯನಲ್ಲಿ ಮನುಷ್ಯತ್ವ ಇದ್ದಾಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಯಾಗಲು ಸಾಧ್ಯ. ಜನರ ಕಷ್ಟ-ಸುಃಖದಲ್ಲಿ ಭಾಗಿಯಾಗುವ ಗುಣವು ಮನ ಮತ್ತು ಮನೆಯಿಂದಲೇ ಆರಂಭಗೊಳ್ಳಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.
ಪಾವೂರು ಗ್ರಾಮದ ಮಲಾರ್ ಯಾದ್ ಫೌಂಡೇಶನ್ ವತಿಯಿಂದ ಮಲಾರ್ ಪದವು ಜಂಕ್ಷನ್‌ನ ಖಾಲಿದ್ ಬಿನ್ ವಲೀದ್ ಮಸೀದಿಯ ವಠಾರದಲ್ಲಿ ಶನಿವಾರ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಶಿಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಸಂಸ್ಕಾರ ಇಲ್ಲದಿದ್ದರೆ ಬದುಕು ವ್ಯರ್ಥ. ನಮ್ಮ ದೇಹವನ್ನು ದುಶ್ಚಟಗಳ ವ್ಯಸನಕ್ಕೆ ಒಡ್ಡದೆ ಜೋಪಾನವಾಗಿಡುವ ಜವಾಬ್ದಾರಿ ನಮ್ಮದಾಗಿದೆ. ಹೆತ್ತವರು, ಅಧ್ಯಾಪಕರು, ಗುರು, ಹಿರಿಯರನ್ನು ಗೌರವದಿಂದ ಕಾಣುವ ಸ್ವಭಾವ ಅಗತ್ಯ. ಬದುಕುವ ಅವಕಾಶ ಕೊಟ್ಟ ನಮ್ಮ ನಾಡು, ನೆಲಕ್ಕೆ ದ್ರೋಹ ಬಗೆಯದೆ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ರವೀಂದ್ರ ರೈ ಕಲ್ಲಿಮಾರ್ ಹೇಳಿದರು.
ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ ಮಾತನಾಡಿ ಪ್ರತಿ ಧರ್ಮದಲ್ಲೂ ವೃತಾನುಷ್ಠಾನದ ಉಲ್ಲೇಖವಿದೆ. ಹಿಂದೂಗಳು ಸಂಕಷ್ಠಿ ದಿನ, ಕ್ರೈಸ್ತರು 40 ದಿನ ವೃತಾನುಷ್ಠಾನ ಮಾಡಿದರೆ ಮುಸ್ಲಿಮರು 30 ದಿನ ಕಟ್ಟುನಿಟ್ಟಾಗಿ ವೃತಾನುಷ್ಠಾನ ಮಾಡುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಪದವಿ ಪಡೆದ ಮುಹಮ್ಮದ್ ಝೈನುದ್ದೀನ್ ಮುಈನಿ ಇನೋಳಿ, ಮುಹಮ್ಮದ್ ಮುಝಮ್ಮಿಲ್ ಮುಈನಿ, ಕೆ.ಎಂ.ಮುಸ್ತಫಾ ದಾರಿಮಿ, ಮುಹಮ್ಮದ್ ರಫೀಕ್ ಮರ್ಝೂಖಿ ಅಸ್ಸಖಾಫಿ, ಆಲಿ ನೌಫಲ್ ಅಸದಿ, ಹಾಫಿಳ್ ಮುಹಮ್ಮದ್ ಶಮ್ಮಾಸ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಾಸಕ ಯು.ಟಿ.ಖಾದರ್, ಅರಸ್ತಾನ ಅಲ್‌ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಎಂ.ಪಿ. ಅಬ್ದುರ‌್ರರಹ್ಮಾನ್, ಬದ್ರಿಯಾ ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಜ್ಮೀರ್ ರಝಾಕ್, ಇನೋಳಿಯ ಜಾಮಿಯಾ ಮುಬಾರಕ್ ಮಸೀದಿಯ ಅಧ್ಯಕ್ಷ ಐ.ಮುಹಮ್ಮದ್, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್, ಪಜೀರ್ ಗ್ರಾಪಂ ಮಾಜಿ ಅಧ್ಯಕ್ಷ ಭರತ್‌ರಾಜ್ ಶೆಟ್ಟಿ ಪಜೀರ್ ಗುತ್ತು, ಬೋಳಿಯಾರ್ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಶುಕೂರ್, ನರಿಂಗಾನ ಗ್ರಾಪಂ ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ, ಕಾಂಗ್ರೆಸ್ ಮುಖಂಡ ಝಕರಿಯಾ ಮಲಾರ್, ಫೌಂಡೇಶನ್‌ನ ಪದಾಧಿಕಾರಿಗಳಾದ ಅಲ್ತಾಫ್ ಹಾಮದ್, ರಿಯಾಝ್ ಅಹ್ಮದ್ ಗಾಡಿಗದ್ದೆ, ರಿಯಾಝ್ ಎಂ.ಎ., ಜಾಫರ್ ಪದವು, ಯಾಹ್ಯಾ ಬೆಂಗ್ರೆ, ಮುಬೀನ್ ಕೆ.ಎಂ., ನಿಝಾಮ್ ಮಲಾರ್, ಯಾಕೂಬ್ ಪಿ., ರಿಯಾಝ್ ಕೋಡಿಕಲ್, ಹಫೀಝ್ ಪಿ., ನೌಷಾದ್ ಮಲಾರ್, ಇಮ್ರಾನ್ ಮಲಾರ್ ಉಪಸ್ಥಿತರಿದ್ದರು. ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.