ಉಡುಪಿ: ‘ನಮ್ಮ ನ್ಯಾಯ ಕೂಟ’ ಮೂಲಕ ಅಂತರ್ಜಾತಿ ವಿವಾಹವಾದ ಕೊರಗ ಯುವಕ

Update: 2023-04-02 16:05 GMT

ಉಡುಪಿ: ಕೊರಗ ಸಮುದಾಯದ ಯುವಕನೋರ್ವ ತಾನು ಪ್ರೀತಿಸಿದ ಬೇರೆ ಜಾತಿಯ ಯುವತಿಯನ್ನು ಆಕೆಯ ಮನೆಯವರ ವಿರೋಧದ ನಡುವೆಯೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಇದರ ಮುಂದಾಳತ್ವದಲ್ಲಿ ʼನಮ್ಮ ನ್ಯಾಯ ಕೂಟʼದ ಮೂಲಕ ಇಂದು ವಿವಾಹವಾದರು.

ಉಡುಪಿ ಪುತ್ತೂರು ಗ್ರಾಮದ ನಿಟ್ಟೂರಿನ ಆದಿವಾಸಿ ಭವನದಲ್ಲಿ ಕೊರಗ ಸಮುದಾಯದ ಸಂಪ್ರದಾಯದ ಪ್ರಕಾರ ನಡೆದ ಈ ಸರಳ ಮದುವೆಗೆ ಒಕ್ಕೂಟದ ಮುಖಂಡರು ಸಾಕ್ಷಿಯಾದರು. ಪುರೋಹಿತರ ವೇದ ಮಂತ್ರ ಘೋಷ್ಯ ಹೋಮ ಹವನ, ಅಲಂಕಾರ, ಅಡಂಬರಗಳಿಲ್ಲದೆ ಪರಸ್ಪರ ಪ್ರೀತಿಸಿದ ನವಜೋಡಿ ಕೊರಗ ಸಮುದಾಯದ ನಮ್ಮ ನ್ಯಾಯ ಕೂಟದ ಮೂಲಕ ಸತಿಪತಿಗಳಾದರು.

ಮೇಸ್ತ್ರಿ ಕೆಲಸ ಮಾಡುತ್ತಿರುವ ಪೆರ್ಡೂರು ಸಮೀಪದ ಅಪ್ಪಿ ಕೊರಗ ಅವರ ಪುತ್ರ ನಿತ್ಯಾನಂದ ಕೆಲವು ವರ್ಷಗಳ ಹಿಂದೆ ಬೇರೆ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಕೊರಗ ಸಮುದಾಯದ ಯುವಕ ಆಗಿರುವುದರಿಂದ ಯುವತಿಯ ಮನೆಯಲ್ಲಿ ಪ್ರೀತಿಗೆ ವಿರೋಧ ಇತ್ತು. ಅಲ್ಲದೆ ಮನೆಯವರು ಯುವತಿಯನ್ನು ಮನೆಯಿಂದ ಹೊರ ಹಾಕಿದರು. ಆಗ ಈ ವಿಚಾರವನ್ನು ನಿತ್ಯಾನಂದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗಮನಕ್ಕೆ ತಂದರು.

ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಸಲು ಒಕ್ಕೂಟ ಪ್ರಯತ್ನ ಪಟ್ಟಿತು. ಆದರೆ ಅದು ಸಾಧ್ಯವಾಗಿಲ್ಲ. ಆ ಕಾರಣಕ್ಕೆ ಒಕ್ಕೂಟವು ತನ್ನ ಸಮುದಾಯದಲ್ಲಿರುವ ನಮ್ಮ ನ್ಯಾಯ ಕೂಟದ ಮೂಲಕ ಈ ಯುವಜೋಡಿಗೆ ಮದುವೆ ಭಾಗ್ಯ ದೊರಕಿಸಿಕೊಟ್ಟಿತು. ಗುರಿಕಾರರಾದ ಕುಟ್ಟಿ ಕೊರಗ ಪೆರ್ಡೂರು ವಿವಾಹ ನೆರವೇರಿಸಿಕೊಟ್ಟರು.

‘ಇವರಿಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊರಗ ಸಮುದಾಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕಾಗಿ ಆಕೆಯನ್ನು ಆಕೆಯ ಮನೆಯಿಂದ ಹೊರ ಹಾಕಿದರು. ಈ ವಿಚಾರವನ್ನು ಹುಡುಗ ಒಕ್ಕೂಟಕ್ಕೆ ತಿಳಿಸಿರುವ ಹಿನ್ನೆಲೆಯಲ್ಲಿ ಇಂದು ನಮ್ಮ ನ್ಯಾಯ ಕೂಟದ ಮೂಲಕ ಸಾಂಪ್ರಾದಾಯಿಕ ವಾಗಿ ವಿವಾಹ ನೆರವೇರಿಸಿ ಕೊಟ್ಟಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.

ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ ಬಜಗೋಳಿ, ಉಪಾಧ್ಯಕ್ಷೆ ಪವಿತ್ರಾ ಮಧುವನ, ಸಂಯೋಜಕರಾದ ಬೊಗ್ರ ಕೊರಗ, ಕೆ.ಪುತ್ರನ್, ಗುರಿಕಾರ ವಿಶ್ವನಾಥ ಪೆರ್ಡೂರು, ಗೋಪಾಲ ಕಾಸರಗೋಡು, ಸಮಗ್ರ ಗ್ರಾಮೀಣ ಆಶ್ರಮದ ಸಂಯೋಜಕ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.

‘ಮುಂದೆ ಕೊಗರ ಪದ್ಧತಿ ಪ್ರಕಾರ ಮದುವೆಯಾಗಿಲ್ಲ ಎಂದು ಯಾರು ಕೂಡ ಪ್ರಶ್ನೆ ಮಾಡಬಾರದು ಎಂಬ ಕಾರಣಕ್ಕೆ ಅದೇ ಪ್ರಕಾರ ಮದುವೆ ಮಾಡಿದ್ದೇವೆ. ನಮ್ಮ ನ್ಯಾಯ ಕೂಟದಿಂದ ಕಾನೂನು ಪ್ರಕಾರ ನೋಂದಾವಣಿಯಾಗಲು ಎಲ್ಲ ಪ್ರಕ್ರಿಯೆಗಳನ್ನು ಮಾಡಿದ್ದೇವೆ. ನ್ಯಾಯ ಕೂಟದಿಂದ ನೀಡಿದ ತೀರ್ಮಾನವೇ ಅಂತಿಮವಾಗುತ್ತದೆ’ -ಸುಶೀಲಾ ನಾಡ, ಅಧ್ಯಕ್ಷರು, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ

ಏನಿದು ನಮ್ಮ ನ್ಯಾಯ ಕೂಟ ವ್ಯವಸ್ಥೆ?

ಕೊರಗ ಸಮುದಾಯದಲ್ಲಿ ಹಿಂದೆ ಗುರಿಕಾರ ಪದ್ಧತಿ ಇತ್ತು. ಪ್ರತಿಯೊಂದು ಸಮಸ್ಯೆ, ವ್ಯಾಜ್ಯಗಳಿಗೂ ನ್ಯಾಯ ಕೊಡುವ ವ್ಯವಸ್ಥೆ ಇತ್ತು. ಇದೀಗ ಆ ವ್ಯವಸ್ಥೆ ಹೆಚ್ಚಿನ ಕಡೆ ನಶಿಸಿ ಹೋಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗಲೂ ನ್ಯಾಯ ಕೊಡುವ ವ್ಯವಸ್ಥೆ ಇಲ್ಲವಾಗಿದೆ. ಈ ಎಲ್ಲ ಕಾರಣದಿಂದ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಹಾಗೂ ನ್ಯಾಯ ಕೊಡವು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ನಮ್ಮ ನ್ಯಾಯ ಕೂಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಒಕ್ಕೂಟದ ಅಧ್ಯಕ್ಷರು ಅಥವಾ ಹಿರಿಯರು ಈ ಕೂಟದ ನ್ಯಾಯಾಧೀಶ ರಾಗಿರುತ್ತಾರೆ. ಅದಕ್ಕೆ ಆರು ಮಂದಿ ಪಂಚರು ಇರುತ್ತಾರೆ. ವ್ಯಾಜ್ಯ ಇರುವ ಎರಡು ಕಡೆಯವರನ್ನು ಕರೆದು ಪ್ರಗತಿಪರ ನಿಲುವು ಹಾಗೂ ಚಿಂತನೆ ಯನ್ನು ಇಟ್ಟುಕೊಂಡು ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ. ಇಲ್ಲಿ ಯಾರಿಗೂ ಅನ್ಯಾಯ ಆಗಲು ಅವಕಾಶವೇ ಇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಮುಖ್ಯ ಆದ್ಯತೆ ಇರುತ್ತದೆ.

ಮೊದಲು ಕೊರಗ ಸಮುದಾಯದವರು ಅಂತರ್‌ ಜಾತಿ ವಿವಾಹ ಆಗುವ ಸಂದರ್ಭದಲ್ಲಿ ಸಮಸ್ಯೆಗಳಾದರೆ ಪೊಲೀಸ್ ಇಲಾಖೆಯ ಮೂಲಕ ಇತ್ಯರ್ಥ ಗೊಳಿಸುವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಈಗ ನಮ್ಮ ನ್ಯಾಯ ಕೂಟದಲ್ಲಿ ಪರಸ್ಪರ ಚರ್ಚಿಸಿ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುತ್ತದೆ. ಈ ಕೂಟದಲ್ಲಿ ಆದ ತೀರ್ಮಾನವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತದೆ. ಕೋರ್ಟ್ ಕೂಡ ಕೂಡ ನೀಡಿದ ನ್ಯಾಯದ ವ್ಯವಸ್ಥೆಯನ್ನು ಸ್ವೀಕರಿಸುತ್ತದೆ. ಇದಕ್ಕೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಧಿಕೃತ ಮನ್ನಣೆ ಸಿಗುತ್ತದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ.

Similar News