×
Ad

ಕಿಕ್ಕಿರಿದು ತುಂಬಿದ್ದ ವೇದಿಕೆ ಕುಸಿದು ಬಿದ್ದು ಇಬ್ಬರು ಕಾಂಗ್ರೆಸ್ ಶಾಸಕರಿಗೆ ಗಾಯ

Update: 2023-04-03 14:59 IST

ರಾಯ್ಪುರ: ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ರವಿವಾರ ನಡೆದ ಪ್ರತಿಭಟನೆಯ ವೇಳೆ ತಾತ್ಕಾಲಿಕ ವೇದಿಕೆಯೊಂದು  ಕುಸಿದು ಬಿದ್ದ ಪರಿಣಾಮ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಗಾಯಗೊಂಡಿದ್ದಾರೆ ಎಂದು  ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

 ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು 'ಪಂಜಿನ ರ್ಯಾಲಿ' ಆಯೋಜಿಸಿತ್ತು. ಘಟನೆಯಲ್ಲಿ ಪಕ್ಷದ ಇತರ ಕೆಲವು ಸದಸ್ಯರೂ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

 ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಕಿಕ್ಕಿರಿದ ತುಂಬಿದ್ದ ವೇದಿಕೆಯು ಏಕಾಏಕಿ ಕುಸಿದು ಬೀಳುತ್ತಿರುವುದು  ಕಂಡುಬಂದಿದೆ.

ಕಾಂಗ್ರೆಸ್‌ನ ಛತ್ತೀಸ್‌ಗಢ ಘಟಕದ ಮುಖ್ಯಸ್ಥ ಮೋಹನ್ ಮಾರ್ಕಮ್ ಅವರು ದೇವಕಿನಂದನ್ ಚೌಕ್‌ನಲ್ಲಿರುವ ಸಂರಕ್ಷಣಾ ಸ್ಥಳದಲ್ಲಿ ಉಪಸ್ಥಿತರಿದ್ದರು ಆದರೆ  ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪಿಟಿಐ ವರದಿ ತಿಳಿಸಿದೆ.

ಘಟನೆಯಲ್ಲಿ ಶಾಸಕರಾದ ಶೈಲೇಶ್ ಪಾಂಡೆ ಹಾಗೂ  ರಶ್ಮಿ ಸಿಂಗ್ ಮತ್ತು ಪಕ್ಷದ ಇತರ ಕೆಲವು ನಾಯಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

'ಪ್ರಜಾಪ್ರಭುತ್ವ ಉಳಿಸಿ ಪಂಜಿನ ರ್ಯಾಲಿ'ಯನ್ನು ಗಾಂಧಿ ಚೌಕ್‌ನಿಂದ ದೇವಕಿನಂದನ್ ಚೌಕ್‌ ತನಕ ಆಯೋಜಿಸಲಾಗಿದ್ದು, ದೇವಕಿನಂದನ್ ಚೌಕದಲ್ಲಿ ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಲಾಗಿತ್ತು ಎಂದು ಬಿಲಾಸ್‌ಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪಾಂಡೆ ಹೇಳಿದರು.

Similar News