×
Ad

ಮುಂಬೈಯಲ್ಲಿ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ವಿಚಾರಣಾಧೀನ ಕೈದಿ: ಕಾರಣವೇನು ಗೊತ್ತೇ?

Update: 2023-04-03 16:41 IST

ಮುಂಬೈ: ತನ್ನ ಮೇಲಿನ ಹಿಂದಿನ ಪ್ರಕರಣಗಳಲ್ಲಿನ ವಿಚಾರಣೆಯಿಂದ ಮುಕ್ತಗೊಳಿಸದಿರುವುದರಿಂದ ಕ್ರುದ್ಧನಾದ ಕೊಲೆ ಪ್ರಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ 40 ವರ್ಷದ ವ್ಯಕ್ತಿಯೊಬ್ಬ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರೊಬ್ಬರ ಮೇಲೆ ಚಪ್ಪಲಿ ತೂರಿರುವ ಘಟನೆ ಕುರ್ಲಾದಲ್ಲಿ ನಡೆದಿದೆ ಎಂದು freepressjournal.in ವರದಿ ಮಾಡಿದೆ.

2016ರಲ್ಲಿ ಕೊಲೆ ಪ್ರಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಾವೇದ್ ಸುಭಾಶ್ ಶೇಖ್ ಅಲಿಯಾಸ್ ಪ್ರದೀಪ್ ಸುಭಾಶ್ ತಯಾಡೆ ಎಂಬ ವ್ಯಕ್ತಿಯನ್ನು ದೋಷಿ ಎಂದು ಘೋಷಿಸಲಾಗಿರುವ ಪ್ರಕರಣದ ಕುರಿತು ಶನಿವಾರ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುತ್ತಿದ್ದಾಗ ಈ ಘಟನೆ ಜರುಗಿದೆ.

ಕೊಲೆ ಪ್ರಯತ್ನ ಪ್ರಕರಣದಲ್ಲಿ ಆರೋಪಿಯನ್ನು ಎನ್‌ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, ಐದು ವರ್ಷಗಳ ಕಾಲ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ 2011ರಲ್ಲಿ ಪುನಃ ಟ್ರಾಂಬೆ ಪೊಲೀಸರು ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧದಿಂದ ತೀವ್ರವಾಗಿ ಗಾಯಗೊಳಿಸಿದ ಆರೋಪ, ಮನೆ ಒಡೆದು ನುಗ್ಗಿದ ಆರೋಪ ಹಾಗೂ ಅತಿಕ್ರಮಣ ಪ್ರವೇಶದ ಆರೋಪದಲ್ಲಿ ತಯಾಡೆ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ, ಆತ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದರೂ ವಿಚಾರಣೆ ಮುಂದುವರಿದಿತ್ತು. ತಯಾಡೆ ಮನ್‌ಖುರ್ದ್‌ನ ಮಹಾರಾಷ್ಟ್ರ ನಗರ ಪ್ರದೇಶದ ನಿವಾಸಿಯಾಗಿದ್ದಾನೆ.

ಶನಿವಾರ, ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮುಂದಾದಾಗ ತನ್ನ ಸ್ತಿಮಿತ ಕಳೆದುಕೊಂಡ ತಯಾಡೆ ನ್ಯಾಯಾಧೀಶರ ವಿರುದ್ಧ ಕೂಗಾಡಲು ಶುರು ಮಾಡಿದ. ಹೀಗೆ ಕೂಗಾಡುವಾಗ ತನ್ನ ವಿರುದ್ಧದ ಎಲ್ಲ ಪ್ರಕರಣಗಳನ್ನೂ ಶೀಘ್ರವೇ ವಿಲೇವಾರಿ ಮಾಡಿ, ನನ್ನನ್ನು ವಿಚಾರಣೆಯಿಂದ ಮುಕ್ತಗೊಳಿಸಬೇಕು ಎಂದು ಆತ ಒತ್ತಾಯಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಮೊದಲು ತನ್ನೆದುರಿರುವ ಎಲ್ಲ ವಸ್ತುಗಳನ್ನೂ ತನ್ನ ಕೈಯಿಂದ ಹೊಡೆಯಲು ಶುರು ಮಾಡಿದ. ನಂತರ ತನ್ನ ಹತ್ತಿರ ಕಂಡ ಚಪ್ಪಲಿಯನ್ನು ಎತ್ತಿಕೊಂಡ ಆತ, ಅದನ್ನು ನ್ಯಾಯಾಧೀಶರತ್ತ ತೂರಿದ. ಆದರೆ, ಇದರಿಂದ ಯಾರಿಗೂ ಗಾಯವಾಗದಿದ್ದರೂ, ಆತನ ಹತ್ತಿರವೇ ಇದ್ದ ಪೊಲೀಸರು ಆತನನ್ನು ನ್ಯಾಯಾಂಗ ನಿಂದನೆಯ ಆರೋಪದಲ್ಲಿ ಮರಳಿ ವಶಕ್ಕೆ ಪಡೆದರು.

ತಯಾಡೆ ವಿರುದ್ಧ ಕುರ್ಲಾ ಪೊಲೀಸರು ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಆತನ ವಿರುದ್ಧ ಹೊಸದಾಗಿ ಸರಣಿ ವಿಚಾರಣೆಗಳು ನಡೆಯಲಿವೆ.

Similar News