×
Ad

ಸರಕಾರಿ ಆಸ್ಪತ್ರೆಯಿಂದಲೇ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ: ಹಜ್ ಯಾತ್ರಿಕರಿಗೆ ಸೂಚನೆ

Update: 2023-04-03 22:00 IST

ಮಂಗಳೂರು: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಹಜ್ ಯಾತ್ರಿಕರು ಮೆಡಿಕಲ್ ಸರ್ಟಿಫೀಕೆಟ್ ಮತ್ತು ಫಿಟ್‌ನೆಸ್ ಪ್ರಮಾಣಪತ್ರವನ್ನು ಸರಕಾರಿ ಆಸ್ಪತ್ರೆಗಳಿಂದ ಪಡೆಯುವಂತೆ ಭಾರತದ ಹಜ್ ಸಮಿತಿ ಆದೇಶಿಸಿದೆ.

ಯಾತ್ರಿಕರಿಗೆ ರೂಪಿಸಲಾದ ಮಾರ್ಗಸೂಚಿಗಳ ಪ್ರಕಾರ ಆಯ್ಕೆಯಾಗಿರುವ ಯಾತ್ರಿಕರು ವೈದ್ಯಕೀಯ ತಪಾಸಣೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರಕ್ಕಾಗಿ ನಿಗದಿತ ನಮೂನೆಯಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಮೆಡಿಕಲ್ ಸರ್ಟಿಫಿಕೆಟ್ ಮತ್ತು ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡುವ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನೀಡಲಾಗಿದೆ.

ಭಾರತ ಸರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ಸರಿಯಾಗಿ ಅನುಮೋದಿಸಿದ ವೈದ್ಯಕೀಯ ತಪಾಸಣೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರದ ನಮೂನೆಯನ್ನು ಹಜ್‌ಯಾತ್ರಿಕರು ಬಳಸಬೇಕು ಎಂದು ಭಾರತದ ಹಜ್ ಕಮಿಟಿಯ ಸಿಇಒ ಮುಹಮ್ಮದ್ ಯಾಕೂಬ್ ಶೇಖ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿರುವುದಾಗಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಾಹಿತಿ ನೀಡಿದ್ದಾರೆ.

ಆಯ್ಕೆಯಾದ ಎಲ್ಲ ಯಾತ್ರಾರ್ಥಿಗಳು ನಿಗದಿತ ಅರ್ಜಿಯ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿರುವ ಸರಕಾರಿ ಅಲೋಪತಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಸಲಹೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Similar News