×
Ad

ತ್ಯಾಗ, ಬದ್ಧತೆಯಿಂದ ದೇಶದ ಭದ್ರತೆ: ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಭಕ್ಷಿ

Update: 2023-04-03 22:06 IST

ಮೂಡುಬಿದಿರೆ: ಭದ್ರತೆ ಎಂದರೆ ಸೇನೆ ನಡೆಸುವ ಕಾರ್ಯಾಚರಣೆ ಮಾತ್ರವಲ್ಲ, ಅದು ಹಲವಾರು ಆಯಾಮಗಳನ್ನು ಒಳಗೊಂಡಿರುತ್ತದೆ. ಬಾಹ್ಯ ದಾಳಿಯಷ್ಟೇ ಆಂತರಿಕ ರಕ್ಷಣೆಯೂ ಮುಖ್ಯವಾಗಿದೆ. ಹಾಗಾಗಿ ತ್ಯಾಗ, ಬದ್ಧತೆಯಿಂದ ದೇಶದ ಭದ್ರತೆ  ಸಾಧ್ಯ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ. ಭಕ್ಷಿ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ-ದಿ ಸ್ಪೀಕರ್ಸ್ ಕ್ಲಬ್ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ‘ದೇಶದ ಭದ್ರತೆ- ದೇಶಪ್ರೇಮ ಮತ್ತು ರಾಷ್ಟ್ರೀಯತೆ’ ಕುರಿತು ಅವರು ಮಾತನಾಡಿದರು.

ದೇಶದ ರಕ್ಷಣೆಯು ಪ್ರಾಯೋಗಿಕ ಹೋರಾಟವಾಗಿದೆ. ಯುದ್ಧಭೂಮಿಗೆ ಇಳಿದ ಬಳಿಕ ಅರ್ಧದಿಂದ ವಾಪಸ್ ಬರುವ ಮಾತಿಲ್ಲ. ದೇಶದ ಭದ್ರತೆಗೆ ನಗರಗಳಲ್ಲಿ ಸೇನೆ ನಿಯೋಜಿಸುವ ಬದಲಾಗಿ ನಾಗರಿಕರೇ ಸೇನಾನಿಗಳಂತೆ ದೇಶದ ಐಕ್ಯತೆಗೆ ಕಟಿಬದ್ಧರಾಗಬೇಕು ಎಂದು ಬಾಂಗ್ಲ ವಿಮೋಚನೆ, ಕಾರ್ಗಿಲ್ ಮತ್ತಿತರ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಭಕ್ಷಿ ಹೇಳಿದರು.

ಸದ್ಯ ಚೀನಾ ಭಾರತದ ಪ್ರಬಲ ಎದುರಾಳಿ. ಆದರೆ ಜಗತ್ತು ಇಂದು ಒಂದೆಡೆ ಧ್ರುವೀಕರಣಗೊಂಡಿಲ್ಲ. ಬಹುಧ್ರುವೀಕರಣ ಹೊಂದುತ್ತಿದೆ. 1979ರ ವಿಯೆಟ್ನಾಂ ಯುದ್ಧ ಸೋತ ನಂತರ ಚೀನಾ ಸೈನಿಕರು ಬೇರೆ ಯುದ್ಧ  ಮಾಡಿಲ್ಲ. ಚೀನಾವು ತೈಲಕ್ಕಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗಿದೆ. ಚೀನಾದ ಜಲಮಾರ್ಗವು ಭಾರತವನ್ನು ಬಳಸಿ ಹೋಗಬೇಕಾಗಿದೆ. ಇಂತಹ ಅಂಶಗಳಿಂದಾಗಿ ಚೀನಾಕ್ಕಿಂತ  ಭಾರತವು ಬಲಿಷ್ಠವಾಗಿದೆ ಎಂದು ನುಡಿದರು.

ನಿವೃತ್ತ ನ್ಯಾಯಮೂರ್ತಿ ಕೃಷ್ಣ ಭಟ್, ಭಕ್ಷಿ ಅವರ ಪತ್ನಿ ಸುನಿತಾ ಭಕ್ಷಿ, ಕರ್ನಲ್ ಅಶೋಕ ಕಿಣಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಪ್ರತೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ಪೊನ್ನಪ್ಪಅತಿಥಿಯನ್ನು ಪರಿಚಯಿಸಿದರು. ಶಾಲಿನಿ ಹೆಗ್ಡೆ ವಂದಿಸಿದರು.

Similar News