ಒಬ್ಬೊಬ್ಬ ಅಭ್ಯರ್ಥಿಗೆ ಬಿಜೆಪಿ 10 ಕೋಟಿ ರೂ.ಹಣ ನೀಡುತ್ತಿದೆ: ದಿನೇಶ್ ಗುಂಡೂರಾವ್ ಆರೋಪ

''ಐಟಿ ಅಧಿಕಾರಿಗಳ ರಕ್ಷಣೆಯ ಮೂಲಕ ಸರಕಾರವೇ ಹಣ ಸಾಗಿಸುತ್ತಿದೆ''

Update: 2023-04-05 14:11 GMT

ಬೆಂಗಳೂರು, ಎ.5: ‘ನಮಗಿರುವ ಮಾಹಿತಿ ಪ್ರಕಾರ ವಿಧಾನಸಭೆ ಚುನಾವಣೆಗಾಗಿ ಒಬ್ಬೊಬ್ಬ ಅಭ್ಯರ್ಥಿಗೆ 10 ಕೋಟಿ ರೂ.ಹಣವನ್ನು ಬಿಜೆಪಿ ನೀಡುತ್ತಿದೆ. ಐಟಿ ಅಧಿಕಾರಿಗಳ ರಕ್ಷಣೆಯ ಮೂಲಕ ಸರಕಾರವೇ ಹಣ ಸಾಗಿಸುತ್ತಿದೆ’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಬುಧವಾರ ನಗರದ ಮಲ್ಲೇಶ್ವರದ ಸಮೀಪವಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಐಟಿ, ಈಡಿ, ಸಿಬಿಐ ಬಿಜೆಪಿಯ ಖಾಸಗಿ ವಿಭಾಗಗಳಾಗಿವೆ. ಅಭ್ಯರ್ಥಿಗಳಿಗೆ ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಬಹುದು. ಅಥವಾ ಐಟಿ ಅಧಿಕಾರಿಗಳೇ ತಲುಪಿಸಬಹುದು. ಬಿಜೆಪಿಗೆ ಅಧಿಕಾರಿಗಳೆಲ್ಲರೂ ರಕ್ಷಣೆ ಕೊಡುತ್ತಿದ್ದು, ಎಲ್ಲಿಲ್ಲಿ ಹಣ ಇಡಬೇಕು, ಎಲ್ಲಿಗೆ ಕಳುಹಿಸಬೇಕು ಅನ್ನುವುದು ಅವರಿಗೆ ಗೊತ್ತಿದೆ’ ಎಂದರು.

‘ಐಟಿ, ಈಡಿ ಅಧಿಕಾರಿಗಳ ಭಯ ಕಾಂಗ್ರೆಸ್‍ಗೆ ಯಾಕೆ ಎಂಬ ಪ್ರಶ್ನೆಯನ್ನು ಸಿಎಂ ಕೇಳಿದ್ದಾರೆ. ಭಯ ನಮಗಿಲ್ಲ, 2018, 2019ರ ಚುನಾವಣೆ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಆಗ ಕಾಂಗ್ರೆಸ್-ಜೆಡಿಎಸ್‍ನವರು ಮಾತ್ರ ಐಟಿ, ಇಡಿ ಕಣ್ಣಿಗೆ ಕಾಣಿಸಿದ್ದು. ಈ ಬಾರಿಯೂ ಅದೇ ರೀತಿ ಮಾಡುತ್ತಿದ್ದಾರೆ. ಸೋಲುವ ಭೀತಿಯಿಂದ ಹೇಗಾದರೂ ತೊಂದರೆ ಕೊಡುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಗಾದಿಯ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲ ಪಕ್ಷದಲ್ಲೂ ಪೈಪೋಟಿ ಇದ್ದೇ ಇರುತ್ತದೆ. ಪೈಪೋಟಿ ಇದ್ದರೆ ರಾಜಕೀಯ ಎನ್ನಿಸಿಕೊಳ್ಳುವುದು. ಆದರೆ, ಸ್ಪರ್ಧೆ ಆರೋಗ್ಯಕರವಾಗಿ ಇರಬೇಕು. ಇನ್ನು ಕಾಂಗ್ರೆಸ್‍ನ ಯಾವುದೇ ಹುದ್ದೆಗಳ ಪೈಪೋಟಿಗಳಿಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿಅಭ್ಯರ್ಥಿ ಘೋಷಣೆಗೂ ಮುನ್ನ ಗುಬ್ಬಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಉಚ್ಚಾಟನೆ

Similar News