ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಕುರಿತು ಅರ್ಜಿ: ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಕ್ಷಗಳಿಗೆ ಹಿನ್ನಡೆ
ಹೊಸದಿಲ್ಲಿ, ಎ. 5: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ತನ್ನ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಕಿರುಕುಳ ನೀಡಲು, ಬೆದರಿಕೆ ಒಡ್ಡಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ 14 ಪ್ರತಿಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಈ.ಡಿ.) ಹಾಗೂ ಸಿಬಿಐ ದಾಖಲಿಸಿದ ಪ್ರಕರಣಗಳ ಸಂಖ್ಯೆ ತೀವ್ರ ಹೆಚ್ಚಳವಾಗಿದೆ ಎಂದು ಪ್ರತಿಪಕ್ಷಗಳ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.
ಹಿಂದಿನ ದಶಕಕ್ಕಿಂತ ಕಳೆದ 7 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ಆರು ಪಟ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ ಎಂದು ತೋರಿಸಲು ಸಿಂಘ್ವಿ ಅವರು ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಅಪರಾಧಿ ಎಂದು ಪರಿಗಣಿತವಾಗಿರುವ ಪ್ರಮಾಣ ಕೇವಲ ಶೇ. 23. ಇ.ಡಿ. ಹಾಗೂ ಸಿಬಿಐಯ ಶೇ. 95 ಪ್ರಕರಣಗಳು ದೇಶಾದ್ಯಂತದ ಪ್ರತಿಪಕ್ಷದ ನಾಯಕರ ವಿರುದ್ಧವಾಗಿವೆ. ಇದು ರಾಜಕೀಯ ದ್ವೇಷ ಹಾಗೂ ಪಕ್ಷಪಾತದ ಸ್ಪಷ್ಟ ಸೂಚನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಅರ್ಜಿಯ ಸಿಂಧುತ್ವ ಹಾಗೂ ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರು ತನಿಖೆ ಹಾಗೂ ಕಾನೂನು ಕ್ರಮದಿಂದ ವಿರೋಧ ಪಕ್ಷಗಳಿಗೆ ವಿನಾಯತಿ ಬಯಸುತ್ತೀರಾ? ನಾಗರಿಕರಾದ ಅವರಿಗೆ ಯಾವುದಾದರೂ ವಿಶೇಷ ಹಕ್ಕುಗಳಿವೆಯೇ? ಎಂದು ಸಿಂಘ್ವಿಯನ್ನು ಪ್ರಶ್ನಿಸಿದ್ದಾರೆ.
ತಾನು ಪ್ರತಿಪಕ್ಷದ ನಾಯಕರಿಗೆ ಯಾವುದೇ ರಕ್ಷಣೆ ಅಥವಾ ವಿನಾಯತಿಯನ್ನು ಕೇಳುತ್ತಿಲ್ಲ. ಬದಲಾಗಿ ಕಾನೂನನ್ನು ಪಾರದರ್ಶಕವಾಗಿ ಹಾಗೂ ಪಕ್ಷಪಾತವಾಗಿ ಅನ್ವಯಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಸಿಂಘ್ವಿ ಸ್ಪಷ್ಟನೆ ನೀಡಿದರು. ಪ್ರತಿಪಕ್ಷವನ್ನು ದುರ್ಬಲಗೊಳಿಸಲು ಹಾಗೂ ಮನೋಸ್ಥೈರ್ಯವನ್ನು ಕುಗ್ಗಿಸಲು ಸರಕಾರ ತನ್ನ ಸಂಸ್ಥೆಗಳನ್ನು ಬಳಸುತ್ತಿದ್ದು, ಇದು ಪ್ರಜಾಪ್ರಭುತ್ವ ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು.
ಆರೋಪಿ ವ್ಯಕ್ತಿಗಳನ್ನು ಬಂಧಿಸುವಾಗ ಸುಪ್ರೀಂ ಕೋರ್ಟ್ ವಿಧಿಸಿದ ‘‘ತ್ರಿವಳಿ ಪರೀಕ್ಷೆ’’ಯನ್ನು ಸರಕಾರ ಉಲ್ಲಂಘಿಸುತ್ತಿದೆ ಎಂದು ಅವರು ಆರೋಪಿಸಿದರು. ಯಾವುದೇ ಪುರಾವೆ ಅಧವಾ ಸಮರ್ಥನೆ ನೀಡದೆ ಹಲವು ಪ್ರತಿಪಕ್ಷದ ನಾಯಕರನ್ನು ಬಂಧಿಸಲಾಗಿದೆ. ಇದು ಚುನಾಯಿತ ಪ್ರತಿನಿಧಿಗಳಾದ ತಮ್ಮ ಕರ್ತವ್ಯ ನಿರ್ವಹಣೆಯ ಸಾಮರ್ಥ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಅಭಿಷೇಕ್ ಮನು ಸಿಂಘ್ವಿ ಅವರು ಹೇಳಿದರು.