ಚುನಾವಣಾ ಹಿನ್ನೆಲೆ: ದ.ಕ.ಜಿಲ್ಲೆಯಲ್ಲಿ ವಾಹನಗಳ ತಪಾಸಣೆ
ಎಸ್ಪಿ, ಜಿಪಂ ಸಿಇಒ ಚೆಕ್‌ಪೋಸ್ಟ್‌ಗಳಿಗೆ ಭೇಟಿ
Update: 2023-04-06 19:04 IST
ಮಂಗಳೂರು, ಎ.6: ದ.ಕ.ಜಿಲ್ಲಾಡಳಿತವು ಚುನಾವಣೆಯ ಕಾರ್ಯಚಟುವಟಿಕೆಗೆ ವೇಗ ನೀಡಿದ್ದು, ಈಗಾಗಲೆ ನಿರ್ಮಿಸಲಾದ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ವಿಶೇಷವಾಗಿ ಹೊರ ರಾಜ್ಯದ ನೋಂದಣಿಯ ವಾಹನಗಳನ್ನು ತಪಾಸಿಸಲಾಗುತ್ತದೆ.
ಹೆಚ್ಚಾಗಿ ಕಾರು, ಲಾರಿ, ಟೆಂಪೋ ಇತ್ಯಾದಿ ವಾಹನಗಳನ್ನು ನಿಲ್ಲಿಸಿ ಪೊಲೀಸರು ಹಾಗೂ ಚುನಾವಣಾ ಕರ್ತವ್ಯಕ್ಕೆ ಸಂಬಂಧಿಸಿದಂತೆ ನಿಯೋಜನೆಗೊಂಡಿರುವ ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ದ.ಕ.ಜಿಪಂ ಸಿಇಒ ಡಾ. ಕುಮಾರ್, ದ.ಕ.ಜಿಲ್ಲಾ ಎಸ್ಪಿ ಡಾ. ವಿಕ್ರಮ್ ಅಮಟೆ ಅವರು ಫರಂಗಿಪೇಟೆ, ತಲಪಾಡಿ, ಆನೆಕಲ್, ಕನ್ಯಾನ, ಉಕ್ಕುಡ, ಸಾರಡ್ಕ, ಮುಡಿಪು, ತಲಪಾಡಿ ಚೆಕ್‌ಪೋಸ್ಟ್‌ಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದರು.