ಕೂದಲು ಕತ್ತರಿಸಿದ್ದು ಸರಿಯಾಗಿಲ್ಲ ಎಂದು ಬಾಲಕ ಆತ್ಮಹತ್ಯೆ !
ಮುಂಬೈ: ಕೂದಲನ್ನು ಸರಿಯಾಗಿ ಕತ್ತರಿಸಿಲ್ಲವೆಂದು ನೊಂದುಕೊಂಡ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈ ಬಳಿಯ ಭಯಾಂಡರ್‌ನಲ್ಲಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಪೊಲೀಸರು ಮೃತ ಬಾಲಕನನ್ನು ಶತ್ರುಘನ್ ಪಾಠಕ್ ಎಂದು ಗುರುತಿಸಿದ್ದು, ಆತ ಭಯಾಂಡರ್‌ನ ಸೋನಂ ಇಂದ್ರಪ್ರಸ್ಥದಲ್ಲಿ ತನ್ನ ಪೋಷಕರು ಹಾಗೂ ಇಬ್ಬರು ಹಿರಿಯ ಸಹೋದರಿಯರೊಂದಿಗೆ ವಾಸಿಸುತ್ತಿದ್ದ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನವಗಢ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಪವಾರ್, "ಪಾಠಕ್ ತನ್ನ ಸೋದರ ಸಂಬಂಧಿಯೊಂದಿಗೆ ಕಟಿಂಗ್‌ಗಾಗಿ ಸಲೂನಿಗೆ ತೆರಳಿದ್ದ. ಅಲ್ಲಿ ಕ್ಷೌರಿಕನು ತನ್ನ ನಿರ್ದೇಶಾನುಸಾರ ಕೂದಲು ಕತ್ತರಿಸದೆ ಇದ್ದುದರಿಂದ ಆತ ಅಸಮಾಧಾನಗೊಂಡಿದ್ದ. ಅಲ್ಲಿ ತನ್ನ ಅಗತ್ಯಕ್ಕನುಗುಣವಾಗಿ ಕೂದಲು ಕತ್ತರಿಸುವಂತೆ ಆತ ಕ್ಷೌರಿಕನಿಗೆ ತಿಳಿಸಿದ್ದ. ಆದರೆ, ಕೂದಲು ಕತ್ತರಿಸುವಾಗ ಕೊಂಚ ಲೋಪವಾಗಿದ್ದರಿಂದ ಕ್ಷೌರಿಕನು ಆತನ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದ. ಆತನ ಆಯ್ಕೆಗಿಂತ ಹೆಚ್ಚು ಚಿಕ್ಕದಾಗಿ ಕೂದಲನ್ನು ಕತ್ತರಿಸಲಾಗಿತ್ತು" ಎಂದು ಹೇಳಿದ್ದಾರೆ.
"ಚಿಕ್ಕದಾಗಿ ಕತ್ತರಿಸಿದ ತನ್ನ ಕೂದಲಿನಿಂದ ಆ ಬಾಲಕ ತೀರಾ ಅಸಮಾಧಾನಗೊಂಡಿದ್ದ ಮತ್ತು ಆತನ ಕುಟುಂಬದ ಸದಸ್ಯರು ಆತನನ್ನು ಸಂತೈಸಲು ಯತ್ನಿಸಿದ್ದರು. ಆದರೆ, ಮಂಗಳವಾರ ರಾತ್ರಿ 11.30ರ ವೇಳೆ ತನ್ನ ಕುಟುಂಬದ ಸದಸ್ಯರು ನಿದ್ರೆಗೆ ಜಾರಿದಾಗ ಆತ್ಮಹತ್ಯೆಗೈದಿದ್ದಾನೆ" ಎಂದು ಅವರು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಯೊಬ್ಬರು ಆತನ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕೂಡಲೇ ಆತನ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನವೇ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದ್ದಾರೆ.
ಮೀರಾ ಭಯಾಂಡರ್ ವಸಾಯ್ ವಿರಾರ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನವಗಢ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
"ನಾವು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದೇವೆ" ಎಂದು ವಿಜಯ್ ಪವಾರ್ ತಿಳಿಸಿದ್ದಾರೆ.