ಬಂಧಿತ ಮಾಜಿ ನೌಕಾಪಡೆ ಅಧಿಕಾರಿಗಳ ಬಿಡುಗಡೆಗೆ ಖತರ್ ಮೇಲೆ ಭಾರತ ಒತ್ತಡ ಹೇರುವುದಿಲ್ಲ: ವಿದೇಶಾಂಗ ಸಚಿವಾಲಯ
ಅಧಿಕಾರಿಗಳ ಬಿಡುಗಡೆಗೆ ಖತರ್ ಮೇಲೆ ಒತ್ತಡ ಹೇರಲು ಪ್ರಧಾನಿ ಹಿಂಜರಿಕೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ಖತರ್‌ನಲ್ಲಿ (Qatar) ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ಎಂಟು ನಿವೃತ್ತ ಅಧಿಕಾರಿಗಳ ಬಿಡುಗಡೆಗೆ ಭಾರತ ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿಲ್ಲ ಹಾಗೂ ಅವರ ಬಿಡುಗಡೆಗೆ ಖತರ್ ಮೇಲೆ ಒತ್ತಡ ಹೇರಲು ಪ್ರಧಾನಿ ನರೇಂದ್ರ ಮೋದಿ ಹಿಂಜರಿಕೆ ತೋರುತ್ತಿದ್ದಾರೆಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಆರೋಪಿಸಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾಋಗಳ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ, ಭಾರತವು ಖತರ್ ದೇಶದ ಕಾನೂನು ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಖತರ್ ಜೊತೆಗಿನ ಸಂಬಂಧ ವೃದ್ಧಿಸಲು ಮೋದಿ ಸರ್ಕಾರ ಬಹಳಷ್ಟು ಹೂಡಿಕೆ ಮಾಡಿದೆ ಎಂದು ಹೇಳಿದ್ದ ಜೈರಾಂ ರಮೇಶ್, ಯಾವುದೇ ಆರೋಪಗಳಿಲ್ಲದೆ ಆಗಸ್ಟ್ 30, 2022 ರಿಂದ ಬಂಧನದಲ್ಲಿರುವ ಈ ಮಾಜಿ ಅಧಿಕಾರಿಗಳ ಶೀಘ್ರ ಬಿಡುಗಡೆಗೆ ಯಾವುದೇ ಯತ್ನ ನಡೆಸಿಲ್ಲ ಎಂದು ಆರೋಪಿಸಿದ್ದರು. ಅದಾನಿ ಇಲೆಕ್ಟ್ರಿಸಿಟಿ ಮುಂಬೈ ಇದರಲ್ಲಿ ಖತರ್‌ನ ಸಾವರಿನ್ ವೆಲ್ತ್ ಫಂಡ್ ಪ್ರಮುಖ ಹೂಡಿಕೆದಾರನಾಗಿರುವುದು ಇದಕ್ಕೆ ಕಾರಣವೇ, ಇದೇ ಕಾರಣಕ್ಕೆ ಬಂಧಿತ ಮಾಜಿ ಅಧಿಕಾರಿಗಳ ಕುಟುಂಬ ಸದಸ್ಯರು ಅವರ ಬಿಡುಗಡೆಗಾಗಿ ಅಲೆದಾಡುವಂತಾಗಿದೆಯೇ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದರಲ್ಲದೆ ಸರಕಾರ ಈ ಕುಟುಂಬಗಳಿಗೆ ಸೂಕ್ತ ವಿವರಣೆ ನೀಡಬೇಕಾಗಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ, ಸರಕಾರ ಖತರ್ ಕಾನೂನು ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ, ಆದರೆ ಭಾರತೀಯ ನಾಗರಿಕರ ವಿರುದ್ಧದ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಹೇಳಿದ್ದಾರೆ.
ಬಂಧಿತ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಖತರ್ ರಕ್ಷಣಾ ಪಡೆಗಳ ಜೊತೆ ಕೆಲಸ ಮಾಡಿವ ಖತರ್‌ನ ಕನ್ಸಲ್ಟೆನ್ಸಿ ಸಂಸ್ಥೆಯೊಂದು ಉದ್ಯೋಗಕ್ಕೆ ಸೇರಿಸಿಕೊಂಡಿತ್ತು ಹಾಗೂ ಅವರು ಖತರ್ ನೌಕಾಪಡೆಯಲ್ಲಿ ತರಬೇತಿಯಲ್ಲಿ ಶಾಮೀಲಾಗಿದ್ದರು. ಅವರ ಬಂಧನಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಅವರ ಬಂಧನಕ್ಕಿಂತ ಮೂರು ತಿಂಗಳ ಹಿಂದೆ ಅವರ ಹಾಗೂ ಭಾರತೀಯ ಅಧಿಕಾರಿಯೊಬ್ಬರ ನಡುವೆ ನಡೆದ ʻಸ್ನೇಹಮಯ ಸಂಭಾಷಣೆʼ ಇದಕ್ಕೆ ಕಾರಣವಾಗಿರಬಹುದೆಂಬ ಶಂಕೆಯಿದೆ.
ಇದನ್ನೂ ಓದಿ: ಅನಿಲ್ ಆ್ಯಂಟನಿಯನ್ನು ಬಿಜೆಪಿ ಕರಿಬೇವಿನ ಸೊಪ್ಪಿನಂತೆ ಬಳಸಿ ಎಸೆಯುತ್ತಾರೆ: ಸಹೋದರ ಅಜಿತ್ ಆ್ಯಂಟನಿ