×
Ad

ಸದಾಶಿವ ಆಯೋಗದ ವರದಿ ಗಮನದಲ್ಲಿಟ್ಟುಕೊಂಡು ಮೀಸಲಾತಿ ಹಂಚಿಕೆ ಮಾಡಲಾಗಿದೆ: ಕೋಟ ಶ್ರೀನಿವಾಸ ಪೂಜಾರಿ

Update: 2023-04-07 22:15 IST

ಮಂಗಳೂರು : ‘.ಕರ್ನಾಟಕದಲ್ಲಿ ಬಿಜೆಪಿ ಸರಕಾರ  ಜನಸಂಖ್ಯೆ ಮತ್ತು ಜಾತಿಗನುಸಾರವಾಗಿ ಜತೆಗೆ ಸದಾಶಿವ ಆಯೋಗದ ವರದಿ ಗಮನದಲ್ಲಿಟ್ಟು ಮೀಸಲಾತಿ ಹಂಚಿಕೆ ಮಾಡಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರಕಾರಕ್ಕೆ ಮೀಸಲಾತಿಯ ಒಳ ಮೀಸಲಾತಿಯನ್ನು ಜಾರಿಗೊಳಿಸುವಾಗ ಸವಾಲು ಎದುರಾಗಿದ್ದು ನಿಜ. ಒಂದು ರೀತಿಯಲ್ಲಿ ನಾವು ಜೇನುಗೂಡಿಗೆ ಕೈ ಹಾಕಿದ್ದೇವೆ. ಆದರೆ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗಬೇಕು ಎನ್ನುವುದು  ನಮ್ಮ ಉದ್ದೇಶವಾಗಿದೆ. ಇದರಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು  ಬದಲಾವಣೆಯನ್ನು ಮತದಾರರಿಗೆ ತಿಳಿಸಿ ಅದನ್ನು ಮತವಾಗಿ ಪರಿವರ್ತಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.

ಒಳಮೀಸಲಾತಿಯ ಮನವರಿಕೆ ಅಗತ್ಯ: ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಒಳ ಮೀಸಲಾತಿ ಟೀಕಿಸುವ ಕಾಂಗ್ರೆಸ್ ನಾಯಕರು ತಾಕತ್ತಿದ್ದರೆ, ಲಿಂಗಾಯತರು, ಒಕ್ಕಲಿಗರು, ಇತರರಿಗೆ ನೀಡಿರುವ ಮೀಸಲಾತಿಯನ್ನು ಅಧಿಕಾರಕ್ಕೆ ಬಂದರೆ ಕಿತ್ತುಹಾಕುವುದಾಗಿ ಹೇಳಲಿ. ಬಿಜೆಪಿ ಕಾರ್ಯಕರ್ತರು ಸರಕಾರ ಜಾರಿಗೊಳಿಸಿದ  ಒಳಮೀಸಲಾತಿ ಸೌಲಭ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಬಿಜೆಪಿ ಆರಂಭ ದಿನದಿಂದಲೂ ಸಿದ್ಧಾಂತದಲ್ಲಿ ರಾಜಿಮಾಡಿಕೊಂಡಿಲ್ಲ. ತನ್ನ ಕಾರ್ಯಶೈಲಿ, ನಿರಂತರ ಪರಿಶ್ರಮದಿಂದಾಗಿ  ದೇಶದಲ್ಲಿ ಬಲಿಷ್ಠ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದರು. 

ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲೆಯ ಸಹಪ್ರಭಾರಿ ರಾಜೇಶ್ ಕಾವೇರಿ ಉಪಸ್ಥಿತರಿದ್ದರು. ಕಸ್ತೂರಿ ಪಂಜ ಸ್ವಾಗತಿಸಿದರು. ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

Similar News