16 ವರ್ಷಗಳ ಹಿಂದಿನ ಆದಿವಾಸಿ ಮಹಿಳೆಯರ ಸಾಮೂಹಿಕ ಅತ್ಯಾಚಾರ ಪ್ರಕರಣ: 21 ಆರೋಪಿ ಪೊಲೀಸರು ಖುಲಾಸೆ
ವಿಶಾಖಪಟ್ಟಣಂ: ಹದಿನಾರು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಗ್ರಾಮದಲ್ಲಿ 11 ಮಂದಿ ಕೊಂಢ್ ಆದಿವಾಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪ ಎದುರಿಸುತ್ತಿದ್ದ 21 ಮಂದಿ ಪೊಲೀಸರನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಪ್ರಕರಣದ ಇಬ್ಬರು ತನಿಖಾಧಿಕಾರಿಗಳು ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ವಿಫಲರಾಗಿದ್ದರಿಂದ ಈ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಆಗಸ್ಟ್ 2007 ರಲ್ಲಿ ನಡೆದ ಘಟನೆಯಲ್ಲಿ ವಿಶೇಷ ಪೊಲೀಸ್ ತಂಡ ಗ್ರೇಹೌಂಡ್ಸ್‌ಗೆ ಸೇರಿದ್ದ ಈ ಸಿಬ್ಬಂದಿ ಆದಿವಾಸಿ ಮಹಿಳೆಯರನ್ನು ಅತ್ಯಾಚಾರಗೈದಿದ್ದರೆಂದು ಆರೋಪಿಸಲಾಗಿತ್ತು.
ವಿಚಾರಣೆ 2018 ರಲ್ಲಿ ಆರಂಭಗೊಂಡಿತ್ತು ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ಕಾರ್ಯಾಚರಿಸುವ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿತಲ್ಲದೆ ಸಂತ್ರಸ್ತೆಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪರಿಹಾರ ಒದಗಿಸಬೇಕೆಂದು ಆದೇಶಿಸಿದೆ.
ಈ ಪ್ರಕರಣದ ಯಾವ ಆರೋಪಿಯನ್ನೂ ಬಂಧಿಸಲಾಗಿರಲಿಲ್ಲ, ಕೆಲವರು ನಿವೃತ್ತಿ ಪಡೆದುಕೊಂಡರೆ ಇನ್ನು ಕೆಲವರು ಅದಾಗಲೇ ನಿಧನರಾಗಿದ್ದಾರೆ.
ಇಪ್ಪತ್ತೊಂದಿ ಮಂದಿ ಪೊಲೀಸರ ತಂಡವೊಂದು ಆಗಸ್ಟ್ 20, 2007 ರಂದು ವಕಪಲ್ಲಿ ಗ್ರಾಮಕ್ಕೆ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿತ್ತೆಂದು ಹ್ಯೂಮನ್ ರೈಟ್ಸ್ ಫೋರಂನ ಆಂಧ್ರಪ್ರದೇಶ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ ಶರತ್ ಹೇಳಿದ್ದಾರೆ.
ಆರೋಪಿ ಪೊಲೀಸರನ್ನು ರಕ್ಷಿಸುವ ಉದ್ದೇಶ ಹೊತ್ತುಕೊಂಡೇ ತನಿಖೆ ನಡೆದಿತ್ತು ಹಾಗೂ ಫೊರೆನ್ಸಿಕ್ ಮತ್ತು ವೈದ್ಯಕೀಯ ವರದಿಗಳನ್ನು ತಿರುಚಲಾಗಿತ್ತು ಎಂದು ಫೋರಂ ಆರೋಪಿಸಿದೆ.