×
Ad

ಮಂಗಳೂರು: ಫಾಸ್ಕಾ ಜಾಗರಣೆಯ ವಿಶೇಷ ಬಲಿಪೂಜೆ

Update: 2023-04-08 22:19 IST

ಮಂಗಳೂರು: ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಫಾಸ್ಕಾ ಜಾಗರಣೆಯ ವಿಶೇಷ ಬಲಿಪೂಜೆಯು ಶನಿವಾರ ನಡೆಯಿತು.

ಈ ಸಂದರ್ಭ ಪ್ರವಚನ ನೀಡಿದ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ‘ಯೇಸುವಿನ ಪುನರುತ್ಥಾನದ ಮೂಲಕ ಮಾನವರು ಮರಣ ಎನ್ನುವುದು ಅಂತಿಮ ಘಟ್ಟವಲ್ಲ.  ಮರಣದ ನಂತರ ಪುನರುತ್ಥಾನದ ಮೂಲಕ ಹೊಸತನ ಬರುತ್ತದೆ ಎನ್ನುವ ಭರವಸೆ ಹುಟ್ಟುತ್ತದೆ ಎಂದು ಹೇಳಿದರು.

ಬೀಜವನ್ನು ಬಿತ್ತುವ ಮೂಲಕ ಅದು ಮೊಳಕೆಯೊಡೆದು ಗಿಡವಾಗುವಂತೆ ಯೇಸುವಿನ ಪುನರುತ್ಥಾನದ ಮೂಲಕ ಮಾನವ ಜಗತ್ತಿನಲ್ಲಿ ಹೊಸ ಭರವಸೆಯೊಂದು ಮೂಡುತ್ತದೆ. ಸಾವಿನ ನಂತರ ಕೂಡ ಬದುಕಿದೆ ಎನ್ನುವ ವಿಚಾರ ವನ್ನು ಕ್ರೈಸ್ತರು ಯೇಸುವಿನ ಪುನರುತ್ಥಾನದ ಮೂಲಕ ವಿಶ್ವಾಸವನ್ನು ಇಟ್ಟುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.

ಬಲಿಪೂಜೆಯ ಮೊದಲು ಫಾಸ್ಕಾ ಜಾಗರಣೆಯ ಮೊಂಬತ್ತಿಯನ್ನು ಬೆಳಗಿಸುವ ಮೂಲಕ ಯೇಸುವಿನ ಪುನರುತ್ಥಾನದ ಜಾಗರಣೆಯನ್ನು ಮಾಡುವ ಜೊತೆಯಲ್ಲೇ ಹಳೆಯ ಒಡಂಬಡಿಕೆಯ ಐದು ಹಾಗೂ ಹೊಸ ಒಡಂಬಡಿಕೆಯ ಎರಡು ಅಧ್ಯಾಯಗಳನ್ನು ಓದಿ, ಕೀರ್ತನೆಯ ಮೂಲಕ ಪ್ರಾರ್ಥನೆಯ ವಿಧಿ ಸಾಗಿತು. ಪವಿತ್ರ ಸಂಸ್ಕಾರಕ್ಕೆ ಬಳಸುವ ಪವಿತ್ರ ಜಲದ ಮೇಲೆ  ಆರ್ಶೀವಾದ ಮತ್ತು ಆ ಬಳಿಕ ಬಲಿಪೂಜೆಯ ವಿಧಿಗಳು ನಡೆಯಿತು.

ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ. ಆಲ್ಪ್ರೆಡ್ ಪಿಂಟೋ ಸಹಿತ ಹಲವು ಧರ್ಮಗುರುಗಳು ಉಪಸ್ಥಿತರಿದ್ದರು. ಕರಾವಳಿಯ ಬಹುತೇಕ ಚರ್ಚ್‌ಗಳಲ್ಲಿ ಶನಿವಾರ ಸಂಜೆಯ ವೇಳೆ  ಫಾಸ್ಕಾ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ನಡೆಯಿತು.  ನಗರದ ಮಿಲಾಗ್ರಿಸ್, ಉರ್ವ, ಅಶೋಕನಗರ, ಕೂಳೂರು, ಬಿಜೈ, ವಾಮಂಜೂರು, ಶಕ್ತಿನಗರದ ಚರ್ಚ್‌ಗಳಲ್ಲಿ ಫಾಸ್ಕಾ ಜಾಗರಣೆಯ ಬಲಿಪೂಜೆಗಳು ಸಾಗಿತು.

ಎ.9ರಂದು ಕ್ರೈಸ್ತರು ಯೇಸುವಿನ ಪುನರುತ್ಥಾನವಾಗಿರುವ ನೆನಪಿನ ಈಸ್ಟರ್ ಹಬ್ಬವನ್ನು  ಆಚರಣೆ ಮಾಡುತ್ತಾರೆ. ಈಸ್ಟರ್ ಹಬ್ಬದ ಆಚರಣೆಯ ಮೂಲಕ ನಲವತ್ತು ದಿನಗಳ ತಪಸ್ಸು ಕಾಲ ಅಂತ್ಯವಾಗುತ್ತದೆ.

ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅವರು ರವಿವಾರ ಬಂಟ್ವಾಳ ಸಮೀಪದ ವಾಮದಪದವು ಚರ್ಚ್‌ನಲ್ಲಿ ಈಸ್ಟರ್ ಹಬ್ಬದ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

Similar News