ನಕಲಿ ಪದವಿಯಿಂದ ಯಾರೂ ಪ್ರಧಾನಿಯಾಗುವುದು ಬೇಡ: ಪ್ರಧಾನಿ ಮೋದಿ ಕುರಿತು ಕೇಜ್ರಿವಾಲ್ ಪರೋಕ್ಷ ವ್ಯಂಗ್ಯ
ಹೊಸದಿಲ್ಲಿ, ಎ. 8: ದಿಲ್ಲಿಯ ಶಿಕ್ಷಣ ಕ್ಷೇತ್ರದಲ್ಲಿ ಆಪ್ ಸರಕಾರದ ಸಾಧನೆ ಕುರಿತು ಪ್ರಶ್ನಿಸಿರುವ ಬಿಜೆಪಿ ನಾಯಕ ಹರೀಶ್ ಖುರಾನಾ ಅವರಿಗೆ ತಿರುಗೇಟು ನೀಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣ ಅರ್ಹತೆ ಕುರಿತಂತೆ ಮತ್ತೊಮ್ಮೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
‘‘ಒಂದು ವೇಳೆ ಕೆಲವು ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಹಿಂದುಳಿದಿದ್ದರೆ, ನಾವು ಅವರಿಗಾಗಿ ಹೆಚ್ಚುವರಿ ತರಗತಿಗಳನ್ನು ಆಯೋಜಿಸಲಿದ್ದೇವೆ. ಅವರಲ್ಲಿ ಒಬ್ಬರ ಭಾರತದ ಪ್ರಧಾನ ಮಂತ್ರಿಯಾಗಲಿದ್ದಾರೆ. ನಾವು ಯಾರೊಬ್ಬರೂ ನಕಲಿ ಪದವಿಯಿಂದ ಪ್ರಧಾನ ಮಂತ್ರಿ ಆಗುವುದನ್ನು ಬಯಸಲಾರೆವು’’ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಖುರಾನಾ ದಿಲ್ಲಿಯ ಸರಕಾರಿ ಶಾಲೆಗಳ ಮಕ್ಕಳ ಕೆಲವು ಅಂಕ ಪಟ್ಟಿಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಗಂಟೆಗಳ ಬಳಿಕ ಪ್ರತಿಕ್ರಿಯೆಯಾಗಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಖುರಾನಾ ಅವರು, ಕಳೆದ ವರ್ಷ 9ನೇ ತರಗತಿಯಲ್ಲಿ 1 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು ಎಂದು ಆರೋಪಿಸಿದ್ದರು.
‘‘ದಿಲ್ಲಿ ಸರಕಾರಿ ಶಾಲೆಗಳ, ಅರವಿಂದ ಕೇಜ್ರಿವಾಲ್ ಅವರ ಶಿಕ್ಷಣ ಕ್ರಾಂತಿಯ ಕುರಿತ ಸತ್ಯವನ್ನು ಒಮ್ಮೆ ಗಮನಿಸಿ. ಕೆಲವು ವಿದ್ಯಾರ್ಥಿಗಳು 80ರಲ್ಲಿ 3 ಅಂಕಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಕೆಲವರು 9 ಅಂಕಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿ ವರ್ಷ 9ನೇ ತರಗತಿಯಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಆದರೆ, ಕೇಜ್ರಿವಾಲ್ ಅವರು ಶಿಕ್ಷಣದಲ್ಲಿ ಕ್ರಾಂತಿ ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಅಚ್ಚರಿಯ ವಿಚಾರ’’ ಎಂದು ಖುರಾನಾ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಿಂದಿಯಲ್ಲಿ ಬರೆದುಕೊಂಡಿದ್ದರು.