ಉಕ್ರೇನ್ ನಲ್ಲಿ ರಶ್ಯ ʼಅಪಹರಿಸಿದ್ದ' ಮಕ್ಕಳು ಸ್ವದೇಶಕ್ಕೆ ವಾಪಾಸು: ಅಪಹರಣ ಆರೋಪ ನಿರಾಕರಿಸಿದ ರಶ್ಯ

Update: 2023-04-09 17:23 GMT

ಕೀವ್, ಎ.9: ಉಕ್ರೇನ್ ನ ಕ್ರಿಮಿಯಾ ಪ್ರಾಂತದಲ್ಲಿ ರಶ್ಯನ್ ಸೇನೆ `ಅಪಹರಿಸಿದ್ದ' 31 ಮಕ್ಕಳನ್ನು ಉಕ್ರೇನ್ ಗೆ ಮರಳಿ ತರುವ ಸುದೀರ್ಘ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು `ಸೇವ್ ಉಕ್ರೇನ್' ಮಾನವೀಯ ಸಂಘಟನೆ ಹೇಳಿದೆ.

ಇದೀಗ ಈ ಮಕ್ಕಳು ಮರಳಿ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ. ಯುದ್ಧದ ಸಂದರ್ಭ ಆಕ್ರಮಿಸಿಕೊಂಡಿದ್ದ ಕ್ರಿಮಿಯಾ, ಖೆರ್ಸಾನ್ ಮತ್ತು ಖಾರ್ಕಿವ್ ಪ್ರದೇಶಗಳಿಂದ ಮಕ್ಕಳನ್ನು ರಶ್ಯ ಸೇನೆ ವಶಕ್ಕೆ ಪಡೆದಿತ್ತು. ಇವರನ್ನು ರಕ್ಷಿಸುವ ಕಾರ್ಯಾಚರಣೆ ಅತ್ಯಂತ ಸುದೀರ್ಘ ಮತ್ತು ಸಂಕೀರ್ಣವಾಗಿತ್ತು' ಎಂದು `ಸೇವ್ ಉಕ್ರೇನ್'ನ ಸ್ಥಾಪಕ ಮಿಕೊಲಾ ಕ್ಯುಲೆಬಾ ಹೇಳಿದ್ದಾರೆ.

ಈ ಮಕ್ಕಳನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದ್ದು ಇಲಿ, ಜಿರಳೆಗಳಿದ್ದ ಕೋಣೆಗಳಲ್ಲಿ ಇರಿಸಲಾಗಿತ್ತು. ಕಳೆದ 5 ತಿಂಗಳಲ್ಲಿ ಕನಿಷ್ಟ 5 ಬಾರಿ ಈ ಮಕ್ಕಳನ್ನು ಇರಿಸಿದ್ದ ಸ್ಥಳವನ್ನು ಬದಲಾಯಿಸಲಾಗಿದೆ ಎಂದವರು ಹೇಳಿದ್ದಾರೆ. ಯುದ್ಧ ಆರಂಭಗೊಂಡ ಬಳಿಕ ಸುಮಾರು 19,500 ಮಕ್ಕಳನ್ನು ಅಕ್ರಮವಾಗಿ ರಶ್ಯಕ್ಕೆ ಅಪಹರಿಸಲಾಗಿದೆ ಎಂದು ಉಕ್ರೇನ್ ಹೇಳುತ್ತಿದೆ. ಆದರೆ ಅಪಹರಣದ ಆರೋಪವನ್ನು ನಿರಾಕರಿಸಿರುವ ರಶ್ಯ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಬೇಸಿಗೆ ಶಿಬಿರದಲ್ಲಿ ಇರಿಸಲಾಗಿದೆ ಎಂದು ಹೇಳುತ್ತಿದೆ.

ಎರಡು ವಾರ ನಡೆಯಲಿರುವ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಕಳುಹಿಸುವಂತೆ ಪೋಷಕರ ಮೇಲೆ ಒತ್ತಡ ಹೇರಿ ರಶ್ಯದ ಅಧಿಕಾರಿಗಳು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ತಥಾಕಥಿತ ಬೇಸಿಗೆ ಶಿಬಿರದಲ್ಲಿ ಸುಮಾರು 6 ತಿಂಗಳು ಅವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದೆ. ಮಕ್ಕಳನ್ನು ಪ್ರತ್ಯೇಕವಾಗಿ ಕಟ್ಟಡಗಳಲ್ಲಿ ಇರಿಸಲಾಗಿದೆ. ನಿಮ್ಮ ಹೆತ್ತವರು ನಿಮ್ಮನ್ನು ತ್ಯಜಿಸಿದ್ದಾರೆ ಎಂದು ಮಕ್ಕಳಲ್ಲಿ ಹೇಳಲಾಗುತ್ತಿತ್ತು' ಎಂದು ಉಕ್ರೇನ್ ಆರೋಪಿಸಿದೆ.

ಆದರೆ, ಸಂಘರ್ಷ ಪೀಡಿತ ಪ್ರದೇಶದಲ್ಲಿ ಅನಾಥರಾಗಿದ್ದ ಮಕ್ಕಳನ್ನು ರಕ್ಷಿಸುವ ಮಾನವೀಯ ಅಭಿಯಾನದಡಿ ಈ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆರಂಭಿಸಲಾಗಿದೆ. ಯಾರನ್ನೂ ಬಲವಂತವಾಗಿ ಅವರ ಹೆತ್ತವರಿಂದ ಬೇರ್ಪಡಿಸಲಾಗಿಲ್ಲ. ಹೆತ್ತವರ ಒಪ್ಪಿಗೆ ಪಡೆದೇ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ದಾಖಲಿಸಲಾಗಿದೆ ಎಂದು ರಶ್ಯದ ಮಕ್ಕಳ ಹಕ್ಕುಗಳ ಆಯುಕ್ತೆ ಮಾರಿಯಾ ಲೊವೋವ ಪ್ರತಿಪಾದಿಸಿದ್ದಾರೆ.

ಆಕ್ರಮಿತ ಉಕ್ರೇನ್ ಪ್ರದೇಶದಿಂದ ಮಕ್ಕಳನ್ನು ಅಪಹರಿಸಿದ ಆರೋಪದಡಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಕಳೆದ ತಿಂಗಳು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಮಾರಿಯಾ ಲೊವೋವ ವಿರುದ್ಧ ಅರೆಸ್ಟ್ ವಾರಾಂಟ್ ಜಾರಿಗೊಳಿಸಿದೆ.

Similar News