ಅಮೃತ್‌ಪಾಲ್ ಪ್ರವೇಶ ಸಾಧ್ಯತೆ: ನೇಪಾಳ ಗಡಿಯಲ್ಲಿ ಕಟ್ಟೆಚ್ಚರ

Update: 2023-04-11 02:31 GMT

ಕಠ್ಮಂಡು: ಖಲಿಸ್ತಾನ ಪ್ರತಿಪಾದಕ ಹಾಗೂ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲು ಪಂಜಾಬ್ ಪೊಲೀಸರು ಸತತ ಪ್ರಯತ್ನ ಮುಂದುವರಿಸಿರುವ ನಡುವೆಯೇ, ದೇಶದ್ರೋಹ ಆರೋಪ ಎದುರಿಸುತ್ತಿರುವ ಸಿಂಗ್ ನೇಪಾಳಕ್ಕೆ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನೇಪಾಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಇಲಾಖೆ ಹೇಳಿದೆ.

ಈ ಕ್ರಾಂತಿಕಾರಿ ಪ್ರವಚಕ ನೇಪಾಳ ಪ್ರವೇಶಿಸುವ ವದಂತಿ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ "ಅಮೃತ್‌ಪಾಲ್ ನೇಪಾಳ ಪ್ರವೇಶಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ" ಎಂದು ನೇಪಾಳ ಪೊಲೀಸ್ ವಕ್ತಾರಪೋಷರಾಜ್ ಪೋಖರಾಜ್ ಪೊಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. ಆದರೆ ನೇಪಾಳ ಪೊಲೀಸರು ಈ ಸಂಬಂಧ ಕಟ್ಟೆಚ್ಚರ ವಹಿಸಿದ್ದಾಗಿ ಅವರು ಹೇಳಿದ್ದಾರೆ.

ಖಲಿಸ್ತಾನವಾದಿ ಮುಖಂಡನನ್ನು ಹುಡುಕುವ ಸಲುವಾಗಿ ಭಾರತದ ಭದ್ರತಾ ಸಿಬ್ಬಂದಿ ನೇಪಾಳ ಪ್ರವೇಶಿಸಿದ್ದಾರೆ ಎಂಬ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ ಅಮೃತ್‌ಪಾಲ್ ನೇಪಾಳಕ್ಕೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಕಟ್ಟೆಚ್ಚರ ವಹಿಸುವಂತೆ ಭಾರತ ನೆರೆರಾಷ್ಟ್ರಕ್ಕೆ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಇದುವರೆಗೆ ಅಮೃತ್‌ಪಾಲ್ ನೇಪಾಳ ಪ್ರವೇಶಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್ 18ರಿಂದ ಅಮೃತ್‌ಪಾಲ್ ಬಂಧನಕ್ಕೆ ಭಾರತದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರೂ ಇದುವರೆಗೆ ಫಲ ನೀಡಿಲ್ಲ.

Similar News