ಮಾನಹಾನಿಕಾರಕ ಸುದ್ದಿ, ಫೋಟೊ, ವೀಡಿಯೊ ಪ್ರಕಟ ಮಾಡದಂತೆ ತಡೆಯಾಜ್ಞೆ ತಂದ ಉಮಾನಾಥ್ ಕೋಟ್ಯಾನ್
ಮಂಗಳೂರು: ವೈಯಕ್ತಿಕ ತೇಜೋವಧೆಯ ಭೀತಿಗೊಳಗಾಗಿರುವ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ತನ್ನ ವಿರುದ್ಧ ಯಾವುದೇ ಫೋಟೊ, ಸುದ್ದಿಗಳನ್ನು ಪ್ರಕಟಿಸದಂತೆ, ವೀಡಿಯೋಗಳನ್ನು ಪ್ರಸಾರ ಮಾಡದಂತೆ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನೋ ಬಿಜೆಪಿ ಟಿಕೆಟ್ ಘೋಷಿಸುವ ಈ ಹಂತದಲ್ಲೇ ಬಿಜೆಪಿಯ ಉಮನಾಥ್ ಕೋಟ್ಯಾನ್ ತನ್ನ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿ, ಫೋಟೋ ಪ್ರಕಟಿಸದಂತೆ, ವೀಡಿಯೊ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಮಧ್ಯೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಉಮನಾಥ್ ಕೋಟ್ಯಾನ್ ‘ಸಾಮಾಜಿಕ ಜಾಲತಾಣ ಸಹಿತ ವಿವಿಧ ಮಾಧ್ಯಮಗಳಲ್ಲಿ ತನ್ನ ವಿರುದ್ಧ ಕೆಲವು ದಿನಗಳಿಂದ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ. ಶೇ.40 ಭ್ರಷ್ಟಾಚಾರ ಮತ್ತು ದೇವಸ್ಥಾನದ ಜಾತ್ರೆಗಳನ್ನು ನಿಲ್ಲಿಸಲಾಗಿದೆ ಎಂಬ ಆರೋಪ ಹೊರಿಸಲಾಗುತ್ತಿದೆ. ಚುನಾವಣೆಯ ಸಂದರ್ಭ ಇದು ಮತದಾರರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ’ ಎಂದಿದ್ದಾರೆ.