×
Ad

ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿಯೊಳಗೆ ಯಾವುದೇ ರೀತಿಯ ಗೊಂದಲ ಇಲ್ಲ: ಸುನಿಲ್‌ ಕುಮಾರ್

Update: 2023-04-11 21:28 IST

ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ರಾಜ್ಯ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಸುನಿಲ್, ರಾಜ್ಯ ನಾಯಕರು, ಕೇಂದ್ರದ ವರಿಷ್ಠರು ಚುನಾವಣೆ ಹೊಸ್ತಿಲಲ್ಲಿ ಟಿಕೆಟ್ ಘೋಷಣೆ ಮಾಡುತ್ತಾರೆ. ಮೊದಲ ಬಾರಿಗೆ ಮತದಾನದ ಮೂಲಕ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ಮಾದರಿಯಲ್ಲಿ ಟಿಕೆಟ್ ಘೋಷಣೆ ಆಗಲಿದೆ ಎಂದವರು ತಿಳಿಸಿದರು.

ಟಿಕೆಟ್ ಕೆಲವರಿಗೆ ಸಿಗಲ್ಲ ಎಂಬ ಬಗ್ಗೆ ಊಹಾಪೋಹಗಳಿವೆ. ಗೆಲುವಿಗೆ ಬೇಕಾದ ಮಾನದಂಡ ಇಟ್ಟುಕೊಂಡು ಎಲ್ಲರಿಗೂ ಅವಕಾಶ ಸಿಗುತ್ತೆ. ಗೆಲ್ಲುವ ಎಲ್ಲ ತಂತ್ರಗಾರಿಕೆಯನ್ನು ಪಕ್ಷ ಮಾಡುತ್ತದೆ ಎಂದು ಅವರು ಹೇಳಿದರು.

ಅಮುಲ್ -ನಂದಿನಿ ವಿವಾದ: ರಾಜ್ಯದಲ್ಲೆಡೆ ಭುಗಿಲೆದ್ದಿರುವ ನಂದಿನಿ- ಅಮುಲ್ ವಿವಾದದ ಕುರಿತು  ಮಾತನಾಡಿದ ಸುನಿಲ್, ಈ ಚುನಾವಣೆ ಯಲ್ಲಿ ಕಾಂಗ್ರೆಸ್‌ಗೆ ಬೇರೆ ಯಾವುದೇ ವಿಚಾರ ಸಿಕ್ಕಿಲ್ಲ. ಹೀಗಾಗಿ ಇದನ್ನು ವಿವಾದವಾಗಿಸುತ್ತಿದೆ ಎಂದು ಆರೋಪಿಸಿದರು.

ನಂದಿನಿ ಉತ್ಪನ್ನ ಹೆಚ್ಚಿಸಿದ್ದು ಬಿಜೆಪಿ ಸರಕಾರ. ಹೈನುಗಾರರಿಗೆ ಪ್ರೋತ್ಸಾಹ ನೀಡಿದ್ದು ಸಹ ನಮ್ಮದೇ ಸರಕಾರ. ಮುಂದೆ ಕೆಎಂಎಫ್‌ಗೆ ಬಿಜೆಪಿ ಹೊಸ ಆಯಾಮಗಳನ್ನು ನೀಡಲಿದೆ ಎಂದರು.

ಕಾಂಗ್ರೆಸ್ ಯಾವತ್ತೂ ಅನಗತ್ಯ ವಿವಾದಗಳನ್ನೇ ಮಾಡುತ್ತಾ ಬಂದಿದೆ. ಇದು ಕಾಂಗ್ರೆಸ್ ಚುನಾವಣೆಗೆ ಮಾಡಿಕೊಂಡಿರುವ ಟೂಲ್ ಅಜೆಂಡಾ. ನಂದಿನಿ ಬೆಳೆಸಿದ್ದು, ಉತ್ಪಾದಕರಿಗೆ ಪ್ರೋತ್ಸಾಹ ಕೊಟ್ಟದ್ದು ಯಾರು ಅಂತ ಜನರಿಗೆ ಗೊತ್ತಿದೆ. ನಮ್ಮ ಸರಕಾರವೇ ನಂದಿನಿಗೆ ಅತಿ ಹೆಚ್ಚು ಶಕ್ತಿ ತುಂಬಿದ್ದು. ಚುನಾವಣೆಯ ಎಲ್ಲಾ ಸಂದರ್ಭಗಳಲ್ಲೂ ಕಾಂಗ್ರೆಸ್ ಈ ರೀತಿ ವಿವಾದ ಮಾಡುತ್ತದೆ ಎಂದರು.

Similar News