ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ವಿಳಂಬ ವಿರುದ್ಧ ನಿರ್ಣಯ: ವಿಪಕ್ಷ ಸರ್ಕಾರಗಳಿಗೆ ಸ್ಟಾಲಿನ್ ಕರೆ

Update: 2023-04-13 09:01 GMT

ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ವಿಳಂಬ ವಿರುದ್ಧ ನಿರ್ಣಯ: ವಿಪಕ್ಷ ಸರ್ಕಾರಗಳಿಗೆ ಸ್ಟಾಲಿನ್ ಕರೆ

ಚೆನ್ನೈ: ಶಾಸನಸಭೆ ಆಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡಲು ಸಮಯ ಮಿತಿ ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಎಲ್ಲ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಆಯಾ ವಿಧಾನಸಭೆಗಳಲ್ಲಿ ಆಂಗೀರಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ವಾಲಿನ್ ಕರೆ ನೀಡಿದ್ದಾರೆ.

ಈ ಸಂಬಂಧ ಬುಧವಾರ ಎಲ್ಲ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಅವರು, "ವಿಧಾನಸಭೆಗಳಲ್ಲಿ ಆಂಗೀಕರಿಸಿ, ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸುವ ಹಲವು ಮಸೂದೆಗಳನ್ನು ಇಂದು ರಾಜ್ಯಪಾಲರು ಅನಿರ್ದಿಷ್ಟಾವಧಿಯವರೆಗೆ ತಡೆ ಹಿಡಿಯುತ್ತಿದ್ದಾರೆ" ಎಂದು ಆಪಾದಿಸಿದ್ದಾರೆ. ಇದರಿಂದಾಗಿ ಈ ಮಸೂದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಆಡಳಿತ ಯಂತ್ರ ಸ್ಥಗಿತವಾಗುತ್ತಿದೆ ಎಂದು ದೂರಿದ್ದಾರೆ.

ಸಮಸ್ಯೆಯ ಹಲವು ಆಯಾಮಗಳನ್ನು ಪರಿಗಣಿಸಿ ತಮಿಳುನಾಡು ಸರ್ಕಾರ, ರಾಜ್ಯಪಾಲ ಆರ್.ಎನ್.ರವಿ ವ್ಯಕ್ತಪಡಿಸಿದ ಸಂದೇಹಗಳ ಬಗ್ಗೆ ಸ್ಪಷ್ಟನೆ ನೀಡುವ ಹಲವು ಪ್ರಯತ್ನಗಳನ್ನು ಮಾಡಿದೆ. ಇದರಲ್ಲಿ ಆನ್‌ಲೈನ್ ರಮ್ಮಿ ನಿಷೇಧಿಸುವ ಮಸೂದೆಯೂ ಸೇರಿದೆ. ಈ ಮಸೂದೆಗೆ ಏಪ್ರಿಲ್ 10ರಂದು ರಾಜ್ಯಪಾಲರ ಅಂಕಿತ ದೊರಕಿದ್ದು, ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ನಮ್ಮ ಪ್ರಯತ್ನಗಳು ವಿಫಲವಾದಾಗ, ಹಲವು ಇತರ ರಾಜ್ಯಗಳೂ ಇಂಥದ್ದೇ ಸಮಸ್ಯೆ ಎದುರಿಸುತ್ತಿವೆ ಎನ್ನುವ ಆಂಶ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸನಸಭೆ ಆಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಸಮಯ ಮಿತಿ ನಿಗದಿಪಡಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಮುಂದಾಗಿದೆ" ಎಂದು ವಿವರಿಸಿದ್ದಾರೆ.

Similar News