×
Ad

ಆಂಧ್ರ ಸಿಎಂ ಪೋಸ್ಟರ್ ಹರಿದ ನಾಯಿ ಮೇಲೆ ದಾಖಲಾಯ್ತು ದೂರು.!

Update: 2023-04-13 22:16 IST

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿದ ಆರೋಪದ ಮೇಲೆ ಟಿಡಿಪಿ ನಾಯಕರೊಬ್ಬರು ನಾಯಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರ ಪೋಸ್ಟರ್‌ ಅನ್ನು ನಾಯಿಯೊಂದು ಹರಿಯುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ವಿಜಯವಾಡದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 

ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡೆ ದಾಸರಿ ಉದಯ ಶ್ರೀ ನಾಯಿಯ ವಿರುದ್ಧ ಪಾಯಕರಾವ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಹಿಂದಿರುವ ನಿಜವಾದ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾಯಿ ಮೇಲೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಾಸರಿ ಉದಯಶ್ರೀ, ‘ಜಗನ್‌ ಮೋಹನ್‌ ರೆಡ್ಡಿ ಪಕ್ಷವು 151 ಸೀಟುಗಳನ್ನು ಗೆದ್ದಿದೆ. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅಂತಹ ಮಹಾನ್‌ ವ್ಯಕ್ತಿಯನ್ನು ಅವಮಾನಿಸಿರುವ ನಾಯಿ ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ‘ ಎಂದಿದ್ದಾರೆ.

‘ಮುಖ್ಯಮಂತ್ರಿಯನ್ನು ಅವಮಾನಿಸಿರುವ ನಾಯಿಯನ್ನು ಮತ್ತು ಈ ಕುತಂತ್ರದ ಹಿಂದಿರುವವರನ್ನು ಬಂಧಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದೇವೆ‘  ಎಂದು ಅವರು ಹೇಳಿದ್ದಾರೆ. 

ಅದಾಗ್ಯೂ, ಜಗನ್‌ ಮೋಹನ್‌ ರೆಡ್ಡಿಯನ್ನು ಅಪಹಾಸ್ಯ ಮಾಡಲೆಂದೇ ಈ ದೂರು ನೀಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳಾಗುತ್ತಿವೆ.

ಜಗನ್ ಮೋಹನ್‌ ರೆಡ್ಡಿ ಪೋಸ್ಟರ್‌ ಅನ್ನು ನಾಯಿಯೊಂದು ಬಾಯಿಯಿಂದ ಕಚ್ಚಿ ಹರಿದಿತ್ತು. ಈ ಪೋಸ್ಟರ್‌ ಮೇಲೆ ‘ಜಗನಣ್ಣ ಮಾ ಭವಿಷ್ಯತು‘ (ಜಗನ್ ಅಣ್ಣನೇ ನಮ್ಮ ಭವಿಷ್ಯ) ಎಂದು ಬರೆಯಲಾಗಿತ್ತು.

Similar News