ರಶ್ಯನ್ ಯೋಧರಿಂದ ಉಕ್ರೇನ್ ಸೈನಿಕನ ಶಿರಚ್ಚೇದನದ ವಿಡಿಯೋ; ವ್ಯಾಪಕ ಖಂಡನೆ

ರಶ್ಯನ್ ಸೈನಿಕರು ದುಷ್ಟ ಮೃಗಗಳು: ಝೆಲೆನ್ಸ್ಕಿ ಆಕ್ರೋಶ

Update: 2023-04-13 17:49 GMT

ಕೀವ್,ಎ.13 : ರಶ್ಯನ್ ಸೈನಿಕರು ಉಕ್ರೇನಿ ಯೋಧನೊಬ್ಬನನ್ನು ಶಿರಚ್ಚೇದನ ಮಾಡಿದಂತೆ ಕಂಡುಬರುವ ವಿಡಿಯೋ ಬಗ್ಗೆ ಅಂತಾರಾಷ್ಟ್ರೀಯವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿರುವಂತೆಯೇ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಈ ಕರಾಳಕೃತ್ಯವೆಸಗಿರುವ ರಶ್ಯನ್ ಸೈನಿಕರನ್ನು ‘‘ ದುಷ್ಟಮೃಗಗಳು’’ ಎಂದು ಆಕ್ರೋಶದಿಂದ ಹೇಳಿದ್ದಾರೆ.

ಈ ವಿಡಿಯೋ ಪ್ರಸಾರವಾದ ಬಳಿಕ ಝೆಲೆನ್ಸ್ಕಿ ಅವರು ಸಾಮಾಜಿಕ ಜಾಲತಾಣವೊಂದರಲ್ಲಿ ಮಾಡಿದ ಪೋಸ್ಟ್ ನಲ್ಲಿ, ಉಕ್ರೇನ್ ನ ಬಂಧಿತ ಯುದ್ಧ ಕೈದಿಯನ್ನು ರಶ್ಯವು ಹತ್ಯೆಗೈದಿರುವುದನ್ನು ಜಗತ್ತು ಅರಿಯಬೇಕಾಗಿದೆ ಎಂದು ಹೇಳಿದ್ದಾರೆ. ಜಗತ್ತಿನ ಯಾರೂ ಕೂಡಾ ನಿರ್ಲಕ್ಷಿಸಲಾಗದಂತಹ ವಿಷಯ ಇದಾಗಿದೆ. ಈ ದುಷ್ಟಮೃಗಗಳು ಆ ಯೋಧನನ್ನು ಹೇಗೆ ಸುಲಭವಾಗಿ ಕೊಂದವು ಎಂದು ವಿಷಣ್ಣಭರಿತರಾಗಿ ಕಾಣುತ್ತಿದ್ದ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ತನ್ನ ಭಾಷಣದ ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ ಇದನ್ನು ನಾವು ಮರೆತುಬಿಡಲಾರೆವು ಅಥವಾ ಈ ಘೋರ ಕೃತ್ಯವೆಸಗಿದವರನನ್ನು ಕ್ಷಮಿಸಲಾರೆವು ಎಂದಿದ್ದಾರೆ.

ಈ ಬರ್ಬರ ಕೃತ್ಯವನ್ನು ಎಸಗಿರುವ ರಶ್ಯವು ಐಸಿಸ್ ಭಯೋತ್ಪಾದಕ ಗುಂಪಿಗಿಂತಲೂ ಕೆಟ್ಟದ್ದೆಂಬುದನ್ನು ತೋರಿಸಿಕೊಟ್ಟಿದೆಯೆಂದು ಉಕ್ರೇನ್ ಸರಕಾರ ಹೇಳಿಕೆಯೊಂದರಲ್ಲಿ ಖಂಡಿಸಿದೆ.

.40 ನಿಮಿಷಗಳ ಅವಧಿಯ ಈ ವಿಡಿಯೋದಲ್ಲಿ ಮಿಲಿಟರಿ ಸಮವಸ್ತ್ರದಲ್ಲಿರುವ ಸಮವಸ್ತ್ರಧಾರಿಯೊಬ್ಬನು ಉಕ್ರೇನ್ ಯೋಧನೊಬ್ಬನ ಶಿರಚ್ಚೇದನ ಮಾಡುವುದನ್ನು ತೋರಿಸಲಾಗಿದೆ. ದಾಳಿಕೋರನನ್ನು ಜೊತೆಯಲ್ಲಿದ್ದ ಇತರರು ರಶ್ಯನ್ ಭಾಷೆಯಲ್ಲಿ ಹುರಿದುಂಬಿಸುವುದು ಕೂಡಾ ಕಂಡುಬಂದಿದೆ. ಶಿರಚ್ಛೇದನಗೊಂಡ ವ್ಯಕ್ತಿಯ ತಲೆಬುರುಡೆಯನ್ನು ಕಮಾಂಡರ್ಗೆ ಕಳುಹಿಸಬೇಕೆಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ಕೂಡಾ ವಿಡಿಯೋದಲ್ಲಿ ಕಂಡುಬಂದಿದೆ.

ಉಕ್ರೇನ್ನ ಯುದ್ಧಕೈದಿಗಳ ವಿಚ್ಛಿದ್ರಗೊಂಡ ಶವಗಳನ್ನು ತೋರಿಸುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗವು ಗಮನಸೆಳೆದಿದೆ.

ಈ ಎರಡೂ ವಿಡಿಯೋಗಳ ಬಗ್ಗೆ ಉಕ್ರೇನ್ ನಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗವು ತೀವ್ರ ಆಘಾತ ವ್ಯಕ್ತಪಡಿಸಿದೆ.

ಯುರೋಪ್ ಒಕ್ಕೂಟ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಈ ವಿಡಿಯೋದ ಅಸಲಿಯೆಂದಾದಲ್ಲಿ, ಉಕ್ರೇನ್ ವಿರುದ್ಧ ರಶ್ಯನ್ ಆಕ್ರಮಣದ ಅತ್ಯಂತ ಅಮಾನವೀಯ ರೂಪ ಇದಾಗಿದೆ ಎಂದರು.

Similar News