×
Ad

ಬಿಜೆಪಿಯಿಂದ ಕಾಂಗ್ರೆಸ್‌ಗೆ 350ಕ್ಕೂ ಅಧಿಕ ಮಂದಿ ಸೇರ್ಪಡೆ: ಗೋಪಾಲ ಪೂಜಾರಿ

Update: 2023-04-14 20:41 IST

ಕುಂದಾಪುರ, ಎ.14: ಬೂತ್ ಮಟ್ಟದಲ್ಲಿ ಸಂಘಟನೆ ಕಾರ್ಯ ಈಗಗಾಲೇ ಆಗುತ್ತಿದೆ. ಮತದಾರರ ಭೇಟಿಗೆ ಒತ್ತು ಕೊಡುತ್ತಿದ್ದೇವೆ. ಬೈಂದೂರು ಕ್ಷೇತ್ರದ ವಿವಿಧ ಭಾಗಗಳಿಂದ ಸುಮಾರು 350ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಬೈಂದೂರು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ.

ಶುಕ್ರವಾರ ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೈಂದೂರಲ್ಲಿ ಬಿಜೆಪಿಯು ಈ ಬಾರಿ ಅಭ್ಯರ್ಥಿ ಬದಲಾಯಿಸಿರುವುದು ಅಚ್ಚರಿ ಅನ್ನಿಸಿಲ್ಲ. ಇದು ನಿರೀಕ್ಷಿತ. ಸುಕುಮಾರ್ ಶೆಟ್ಟರಿಗೆ ಕೊಡಬಾರದು ಅನ್ನುವ ತೀರ್ಮಾನವನ್ನು ಸಂಘ ಪರಿವಾರ ಮೊದಲೇ ಮಾಡಿತ್ತು. ನಮಗೆ 3-4 ತಿಂಗಳು ಮೊದಲೇ ಗೊತ್ತಿತ್ತು. ಆದರೆ ಅವರು ಟಿಕೆಟ್ ಸಿಗುವುದಾಗಿ ನಂಬಿಕೊಂಡಿದ್ದರು ಎಂದರು.

ಹಾಲಿ ಶಾಸಕರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಹಾಲಿ ಶಾಸಕರ ಬದಲಾಯಿಸಿ ಆರೆಸ್ಸೆಸ್ ಮೂಲದ ಅಭ್ಯರ್ಥಿಗೆ ಅವಕಾಶ ನೀಡಿದೆ. ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದು ಕೊಳ್ಳುತ್ತದೆ. ಅದು ಸುಕುಮಾರ್ ಶೆಟ್ಟರೇ ಆಗಲಿ ಅಥವಾ ಗುರುರಾಜ್ ಗಂಟಿಹೊಳೆ ಅವರೇ ಆಗಲಿ. ಯಾರೇ ಆದರೂ, ಬಿಜೆಪಿ ಸೋಲಿಸಲು ಏನೆಲ್ಲ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆ-ಮನೆಗೆ ತಲುಪಿಸಲಾಗುತ್ತಿದೆ. ಬೈಂದೂರಿನ ಪ್ರಣಾಳಿಕೆಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಈ ಬಾರಿ ಸಾಮಾಜಿಕ ಜಾಲತಾಣದಲ್ಲಿಯೂ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ನಾಮಪತ್ರ ಸಲ್ಲಿಕೆ ಬಳಿಕ ಇನ್ನಷ್ಟು ಚುರುಕುಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

Similar News