ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೆಡಿಕಲ್ ವಿದ್ಯಾರ್ಥಿ ಸಹಿತ 3 ಮಂದಿ ಸೆರೆ

5.4 ಕೆ.ಜಿ. ಗಾಂಜಾ ವಶ

Update: 2023-04-14 16:59 GMT

ಮಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೆಡಿಕಲ್ ವಿದ್ಯಾರ್ಥಿ ಸಹಿತ ಮೂರು ಮಂದಿಯನ್ನು  ಮಂಗಳೂರು ದಕ್ಷಿಣ ಠಾಣೆ ಮತ್ತು ಮಂಗಳೂರು ಸಿಸಿಬಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ  ದಸ್ತಗಿರಿ ಮಾಡಿದ್ದಾರೆ.

ವೆಲೆನ್ಸಿಯಾ, ಗೋರಿಗುಡ್ಡೆಯ  ಪ್ರಜ್ವಲ್ ಫಿನ್ಹಾನ್ (26), ಸಕಲೇಶಪುರದ ಧ್ರುವ ಶೆಟ್ಟಿ(19) ಮತ್ತು ಕುಳಾಯಿಯ ಶಿವಾನಿ (22) ಬಂಧಿತ ಆರೋಪಿಗಳು.

ಆರೋಪಿಗಳ ಬಳಿಯಿದ್ದ 1,40,000 ರೂ. ಮೌಲ್ಯದ 5 ಕೆಜಿ 400 ಗ್ರಾಂ ಗಾಂಜಾವನ್ನು ಹಾಗೂ 4 ಮೊಬೈಲ್ ಫೋನ್ ಗಳನ್ನು ಮತ್ತು 1 ಟ್ಯಾಬ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಶೀತಲ್ ಅಲಗೂರು ರವರಿಗೆ ಬಂದ ಮಾಹಿತಿ ಮೇರೆಗೆ ಆರೋಪಿ ಪ್ರಜ್ವಲ್ ಫಿನ್ಹಾನ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಆತನ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಸಿಸಿಬಿ ಘಟಕದ ಅಧಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ.

ಆರೋಪಿಗಳ ಪೈಕಿ ಪ್ರಜ್ವಲ್ ಎಂಬಾತನು ಮಹಾರಾಷ್ಟ್ರ ರಾಜ್ಯದಿಂದ ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು ಮಂಗಳೂರಿನಲ್ಲಿ ಆತನ ಸ್ನೇಹಿತರಾದ ಧ್ರುವ ಶೆಟ್ಟಿ ಮತ್ತು ಶಿವಾನಿ ಅವರಿಗೆ ನೀಡಿ ಅವರ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ಪೈಕಿ ಪ್ರಜ್ವಲ್ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಎಂ.ಡಿ.ಎಂ.ಎ ಮತ್ತು ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐ ರಾಜೇಂದ್ರ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಶೀತಲ್ ಅಲಗೂರು, ಪಿಎಸ್‌ಐ ಜ್ಯೋತಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.

Similar News