×
Ad

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿ: ಪಾದಚಾರಿ ಸ್ಥಳದಲ್ಲೇ ಮೃತ್ಯು

Update: 2023-04-14 22:54 IST

ಸುರತ್ಕಲ್:‌ ರಾಷ್ಟ್ರೀಯ ಹೆದ್ದಾರಿ ದಾಟುತ್ತದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಕ್ಕ ಸತ್ಯಧರ್ಮ ದೇವಸ್ಥಾನದ ಬಳಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ನಿವಾಸಿ ಜೀವನ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಜೀವನ್‌ ಕುಮಾರ್‌ ಅವರು ಧರ್ಮಸ್ಥಳ ಯಕ್ಷಗಾನ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಂಕ್ರಾತಿಯ ಹಿನ್ನೆಲೆಯಲ್ಲಿ ಮುಕ್ಕ ಸತ್ಯಧರ್ಮ ದೇವಸ್ಥಾನದ ವಠಾರದಲ್ಲಿ ಧರ್ಮಸ್ಥಳ ಕ್ಷೇತ್ರದ ಯಕ್ಷಗಾನ ಬಯಲಾಟ ನಡೆಯಲಿತ್ತು. ಈ ಹಿನ್ನೆಲೆಯಲ್ಲಿ ರಂಗಸ್ಥಳದ ಕೆಲಸ ಮುಗಿಸಿ ರಾಷ್ಟ್ರೀಯ ಹೆದ್ದಾರಿ ದಾಟಿ ಮುಕ್ಕ ಪೇಟೆಯ ಹೋಟೇಲ್‌ಗೆ ಚಾ ಕುಡಿಯಲು ಹೋಗುತ್ತಿದ್ದ ವೇಳೆ ಕಾರೊಂದು ಜೀವನ್‌ ಅವರಿಗೆ ಡಿಕ್ಕಿ ಹೊಡೆಯಿತೆನ್ನಲಾಯಿದೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಅಪಘಾತ ನಡೆಸಿದ ಕಾರು ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಸಾರ್ವಜನಿಕರು ಕಾರಿನ ನಂಬರ್‌ ನೋಡಿ ಹಳೆಯಂಗಡಿಯ ಪರಿಚಯದವರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಹಳೆಯಂಗಡಿ ನಾಗರಿಕರು ಕಾರನ್ನು ಹಳೆಯಂಗಡಿಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ಉತ್ತರ ಸಂಚಾರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಮಾಹಿತಿ ಕಲೆಹಾಕಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Similar News