×
Ad

ನಾಗಾಲ್ಯಾಂಡ್ ನಾಗರಿಕರ ಹತ್ಯೆ: 30 ಸೇನಾ ಸಿಬ್ಬಂದಿ ವಿಚಾರಣೆಗೆ ಅನುಮತಿ ನಿರಾಕರಿಸಿದ ರಕ್ಷಣಾ ಸಚಿವಾಲಯ

Update: 2023-04-14 23:59 IST

ಹೊಸದಿಲ್ಲಿ, ಎ. 14: ನಾಗಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ 2021ರಲ್ಲಿ ನಾಗರಿಕರ ಹತ್ಯೆಗೆ ಸಂಬಂಧಿಸಿ ಭಾರತೀಯ ಸೇನೆಯ 30 ಸಿಬ್ಬಂದಿಯ ವಿಚಾರಣೆಗೆ ರಕ್ಷಣಾ ಸಚಿವಾಲಯ ಅನುಮತಿ ನಿರಾಕರಿಸಿದೆ ಎಂದು ನಾಗಾಲ್ಯಾಂಡ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

‘‘ಸಕ್ಷಮ ಪ್ರಾಧಿಕಾರ (ಸೇನಾ ವ್ಯವಹಾರಗಳ ಇಲಾಖೆ, ರಕ್ಷಣಾ ಸಚಿವಾಲಯ, ಭಾರತ ಸರಕಾರ) ಎಲ್ಲ 30 ಆರೋಪಿಗಳ ವಿಚಾರಣೆ ನಡೆಸಲು ಅನುಮತಿ ನಿರಾಕರಿಸಿದೆ’’ ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. 

‘‘ಕಾನೂನಿನ ಪ್ರಕಾರ ವಿಚಾರಣೆಗೆ ಅನುಮತಿ ನಿರಾಕರಿಸಿರುವ ವಿಚಾರವನ್ನು ರಾಜ್ಯ ಅಪರಾಧ ಕೋಶ ಪೊಲೀಸ್ ಠಾಣೆ ಹಾಗೂ ವಿಶೇಷ ತನಿಖಾ ಸಂಸ್ಥೆ ಮೊನ್‌ನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದೆ’’ ಎಂದು ವರದಿ ಹೇಳಿದೆ.  

ಈ ಸುದ್ದಿಗೆ ಪ್ರತಿಕ್ರಿಯಿಸಿದ ‘ನಾಗಾ ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್’ನ ಪ್ರಧಾನ ಕಾರ್ಯದರ್ಶಿ ನೆಯಿಂಗುಲೊ ಕ್ರೋಮೆ, ‘‘ಕಳೆದ 50-60 ವರ್ಷಗಳಲ್ಲಿ ನಮ್ಮ ಜನರ ಮೇಲೆ ಅವರು ಮಾಡಿದ ದೌರ್ಜನ್ಯಕ್ಕೆ ಇದುವರೆಗೆ ಯಾವುದೇ ಸೇನಾ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿಲ್ಲ’’ ಎಂದಿದ್ದಾರೆ. 

ರಾಜ್ಯ ಪೊಲೀಸರು ವಿಚಾರಣೆಗೆ ಕೇಂದ್ರದಿಂದ ಅನುಮತಿ ಪಡೆಯದ ಕಾರಣ 30 ಆರೋಪಿ ಸೇನಾ ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಜುಲೈಯಲ್ಲಿ ತಡೆ ನೀಡಿತ್ತು. 2021 ಡಿಸೆಂಬರ್ 4ರಂದು ಮೊನ್ ಜಿಲ್ಲೆಯಲ್ಲಿ ಟಿರು-ಒಟಿಂಗ್ ಪ್ರದೇಶದಲ್ಲಿ ಪಿಕ್‌ಅಪ್ ವ್ಯಾನ್‌ನಲ್ಲಿ ತೆರಳುತ್ತಿದ್ದ 6 ಮಂದಿ ಸ್ಥಳೀಯ ಗಣಿ ಕಾರ್ಮಿಕರನ್ನು ಉಗ್ರರು ಎಂದು ತಪ್ಪು ಭಾವಿಸಿ ಸೇನೆಯ 21 ಪ್ಯಾರಾ ವಿಶೇಷ ಪಡೆಗಳು ಗುಂಡು ಹಾರಿಸಿ ಹತ್ಯೆಗೈದಿತ್ತು. ಇದರಿಂದ ಜನರು ಆಕ್ರೋಶಿತರಾಗಿ ಪ್ರತಿಭಟನೆ ನಡೆಸಿದ್ದರು. ಸೇನೆಯ ವಾಹನಗಳಿಗೆ ಬೆಂಕಿ ಹಚಿದ್ದರು. ಈ ಸಂದರ್ಭ ಯೋಧರು ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ 7 ಮಂದಿ ನಾಗರಿಕರು ಸಾವನ್ನಪ್ಪಿದ್ದರು.

Similar News